ಮಧುಗಿರಿ, ಮಾ.08 (DaijiworldNews/MB): ''ನನ್ನ ಐದು ವರ್ಷದ ಅಧಿಕಾರದ ಸಂದರ್ಭ ನಾನು ಲಂಚ ಪಡೆದಿದ್ದೇನೆ ಎಂದು ಯಾರದರೂ ಸಾಬೀತು ಮಾಡಿದರೆ ನಾನು ರಾಜಕಾರಣದಿಂದಲೇ ನಿವೃತ್ತಿ ಪಡೆಯುತ್ತೇನೆ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲೆಸೆದಿದ್ದಾರೆ.
ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
''ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅವರ ಪುತ್ರನ ಮುಖೇನ ಲಂಚ ಪಡೆದು ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ಹೊಟೇಲ್ನಲ್ಲಿ ತಿಂಡಿಯ ದರ ಹಾಕಿದಂತೆ ವಿಜಯೇಂದ್ರನ ಕಚೇರಿಯಲ್ಲಿ ಇಂತಹ ಅಧಿಕಾರಿಗಳ ವರ್ಗಾವಣೆಗೆ ಇಷ್ಟು ಹಣ ಎಂದು ಬೋರ್ಡ್ ಹಾಕಲಾಗಿದೆ'' ಎಂದು ಗಂಭೀರ ಆರೋಪ ಮಾಡಿರುವ ಸಿದ್ದರಾಮಯ್ಯನವರು, ''ಜನರು ರಾಜ್ಯದಲ್ಲಿ ಇಂತಹ ಭ್ರಷ್ಟ ಸರ್ಕಾರವನ್ನು ಎಂದಿಗೂ ನೋಡಿಲ್ಲ. ಕೊರೊನಾ ನಿಯಂತ್ರಣಕ್ಕಾಗಿ 4 ಸಾವಿರದ 400 ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ ಅದರ ಅರ್ಧದಷ್ಟು ಹಣವನ್ನು ನುಂಗಿ ಹಾಕಿದ್ದಾರೆ'' ಎಂದು ದೂರಿದರು.
ಇನ್ನು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಬೆನ್ನಲ್ಲೇ ಕೋರ್ಟ್ ಮೊರೆ ಹೋದ ಸಚಿವರ ವಿಚಾರವಾಗಿ ಮಾತನಾಡಿದ ಅವರು, ''ಬಿಎಸ್ವೈ ಸಂಪುಟದ ಮಂತ್ರಿಗಳು ತಮ್ಮ ಸಿಡಿ ಬಿಡುಗಡೆಯಾಗುತ್ತದೆ ಎಂದು ಭಯದಿಂದ ಕೋರ್ಟ್ ಮೊರೆ ಹೋದರು. ಈ ಹಿಂದೆ ಬಿಜೆಪಿಯವರೇ ಸದನದಲ್ಲಿ ಬ್ಲ್ಯೂ ಫಿಲಂ ನೋಡಿದವರು. ಇವರು ರಾಮನ ಭಕ್ತರುಗಳೇ?'' ಎಂದು ಲೇವಡಿ ಮಾಡಿದರು.