ಹರಿಂಗಾಟಾ, ಮಾ.08 (DaijiworldNews/MB): ಬಿಜೆಪಿ ಮುಖಂಡರೋರ್ವರ ಮೇಲೆ ತಂಡವೊಂದು ಗುಂಡಿನ ದಾಳಿ ನಡೆಸಿದ ಘಟನೆ ಪಶ್ಚಿಮ ಬಂಗಾಳದ ನಾದಿಯ ಜಿಲ್ಲೆಯ ಹರಿಂಗಾಟಾ ಎಂಬಲ್ಲಿ ನಡೆದಿದ್ದು ಬಿಜೆಪಿಯು ಈ ದಾಳಿಯನ್ನು ತೃಣಮೂಲ ಕಾಂಗ್ರೆಸ್ನ ಗೂಂಡಾಗಳು ನಡೆಸಿರುವುದಾಗಿ ಆರೋಪಿಸಿದೆ.
ಹರಿಂಗಾಟಾ ನಗರಸಭೆಯ ವಾರ್ಡ್ ನಂ.10ರ ಬಿಜೆಪಿ ಬೂತ್ ಅಧ್ಯಕ್ಷರಾಗಿರುವ 32 ವರ್ಷದ ಸಂಜಯ್ ದಾಸ್ ಗಾಯಗೊಂಡ ಬಿಜೆಪಿ ಮುಖಂಡ.
ಈ ಬಗ್ಗೆ ಮಾಹಿತಿ ನೀಡಿರುವ ರಣಘಾಟ್ ಎಸ್ಪಿ ವಿ.ಎಸ್.ಆರ್ ಅನಂತ್ನಾಗ್, ''ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಕಪಿಲೇಶ್ವರ ಸಂತೋಷ್ಪುರದ ಚಹಾ ಅಂಗಡಿಯೊಂದರ ಬಳಿ ಒಂದು ಗುಂಪು ಕುಳಿತ್ತಿದ್ದು ಪೊಲೀಸರು ಬರುತ್ತಿದ್ದಂತೆ ಆ ಗುಂಪಿನಲ್ಲಿದ್ದವರು ಓಡಿಹೋದರು. ಓರ್ವ ಮಾತ್ರ ಅಲ್ಲಿ ಇದ್ದ. ಆ ಹಿನ್ನೆಲೆ ಪೊಲೀಸರು ಸಮೀಪಕ್ಕೆ ತೆರಳಿದಾಗ ಬಿಜೆಪಿ ಮುಖಂಡ ಸಂಜಯ್ ದಾಸ್ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗುಂಪಿನಲ್ಲಿದ್ದವರು ನನ್ನ ಮೇಲೆ ಗುಂಡು ಹಾರಿಸಿದ್ದು ನನ್ನ ಸೋಂಟದ ಭಾಗಕ್ಕೆ ಏಟಾಗಿದೆ ಎಂದು ಸಂಜಯ್ ತಿಳಿಸಿದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ'' ಎಂದು ತಿಳಿಸಿದ್ದಾರೆ.
ಇನ್ನು, ''ಇದು ತೃಣಮೂಲ ಕಾಂಗ್ರೆಸ್ನ ಗೂಂಡಾಗಳ ಕೃತ್ಯ'' ಎಂದು ಬಿಜೆಪಿ ಆರೋಪಿಸಿದ್ದು ಆಡಳಿತಾರೂಢ ಟಿಎಂಸಿ ಮಾತ್ರ ಈ ಆರೋಪವನ್ನು ಅಲ್ಲಗಳೆದಿದೆ. ''ಈ ದಾಳಿ ಬಿಜೆಪಿಯೊಳಗೆಯೇ ಇರುವ ಗುಂಪಿನ ಘರ್ಷಣೆಯಿಂದಾಗಿ ನಡೆದಿದೆ'' ಎಂದು ಹೇಳಿದೆ.