ತ್ಯಾಮಗೊಂಡ್ಲು, ಮಾ.08 (DaijiworldNews/MB): ದನದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭ ಕೊಟ್ಟಿಗೆಯಲ್ಲಿದ್ದ ದನಗಳನ್ನು ರಕ್ಷಿಸಲು ಮುಂದಾದ ಯುವಕ ಅಗ್ನಿಗಾಹುತಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾವರೆಕೆರೆಯಲ್ಲಿ ನಡೆದಿದೆ.
ಮೃತ ಯುವಕ ಲೋಕೇಶ್ (24 ವರ್ಷ) ಎಂದು ಗುರುತಿಸಲಾಗಿದೆ.
ಈ ಗ್ರಾಮದ ಶ್ರೀನಿವಾಸ್ ಎಂಬವರ ಮನೆಯಲ್ಲಿ ಶನಿವಾರ ರಾತ್ರಿ ದನದ ಕೊಟ್ಟಿಗೆಯ ಸಮೀಪವಿದ್ದ ಬಚ್ಚಲು ಮನೆಯ ಒಲೆಯಿಂದ ಬೆಂಕಿಯು ಹರಡಿದ್ದು ಅದು ತನ್ನ ಕೆನ್ನಾಲಿಗೆಯನ್ನು ಕೊಟ್ಟಿಗೆಗೂ ಚಾಚಿತು. ಈ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿದ್ದ 3 ದನಗಳನ್ನು ರಕ್ಷಿಸಲು ಲೋಕೇಶ್ ಮುಂದಾಗಿದ್ದು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾನೆ.
ಆದರೆ ಅದಾಗಲೇ ಅಗ್ನಿಯ ಜ್ವಾಲೆ ಆತನ ಶೇ. 80 ರಷ್ಟು ದೇಹವನ್ನು ಆವರಿಸಿದ್ದು ಆತನನ್ನು ಬಳಿಕ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.