ಬೆಂಗಳೂರು, ಮಾ. 07 (DaijiworldNews/SM): ಕೊರೋನಾ ಸೋಂಕು ನಿರ್ಮೂಲನೆಯ ದೃಷ್ಠಿಯಿಂದ ಲಸಿಕೆ ವಿತರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಸೋಮವಾರದಿಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗೆಳು, ಜಿಲ್ಲಾಸ್ಪತ್ರೆ ಸೇರಿ ಸುಮಾರು 3 ಸಾವಿರ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂಬುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಪ್ರತಿ ದಿನ ಒಂದರಿಂದ ಒಂದೂವರೆ ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಚರ್ಚಿಸಲಾಗಿದೆ. ಈ ಹಿನ್ನೆಲೆ ಸೋಂಕು ನಿಯಂತ್ರಣಕ್ಕೆ ತರುವ ಜವಾಬ್ದಾರಿ ಇದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕು ಎಂದು ಸಚಿವರು ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 200-250 ಸೋಂಕಿತರು ಕಂಡುಬರುತ್ತಿದ್ದು, ಈ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಾಗಿ ನಗರದಲ್ಲಿ 12 ಕ್ಲಸ್ಟರ್ ಗುರುತಿಸಲಾಗಿದೆ. ನಗರದಲ್ಲಿ 30 ಸಾವಿರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಅದನ್ನು 40 ಸಾವಿರಕ್ಕೆ ಏರಿಸಲಾಗುವುದು ಎಂದು ತಿಳಿಸಿದರು.
ಸೋಂಕಿತರು ಹೆಚ್ಚಿರುವ ಪ್ರದೇಶಗಳಲ್ಲಿ ಸಂಪರ್ಕ ಪತ್ತೆ ಹೆಚ್ಚಿಸಬೇಕಿದೆ. ಹಿಂದಿನಂತೆ ಒಬ್ಬ ಸೋಂಕಿತನಿಗೆ 20 ಸಂಪರ್ಕಿತ ವ್ಯಕ್ತಿ ಪತ್ತೆ ಕಾರ್ಯ ನಡೆಸಬೇಕೆಂದು ಕೇಂದ್ರದ ನಿಯೋಗ ಸೂಚಿಸಿದೆ. ಆ 20 ಮಂದಿಯನ್ನು ಪತ್ತೆ ಮಾಡಿ ಅವರಿಗೂ ಪರೀಕ್ಷೆ ಮಾಡಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.