ಬೆಂಗಳೂರು, ಮಾ. 07 (DaijiworldNews/SM): ಕೋವಿಡ್ ಸಾಂಕ್ರಾಮಿಕ ಮತ್ತು ವರ್ಷಪೂರ್ತಿ ನಿಭಾಯಿಸುವ ಮಧ್ಯೆಯೇ, ಇದೀಗ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2021-22ರ ಬಜೆಟ್ ಮಂಡನೆಗೆ ಸಿದ್ಧರಾಗಿದ್ದು, ಮಾರ್ಚ್ 8ರ ಸೋಮವಾರದಂದು ವಿಧಾನಸಭೆಯಲ್ಲಿ ಆಯವ್ಯಯ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
"ಯಡಿಯೂರಪ್ಪ ಅವರು ಸೋಮವಾರ ಮಧ್ಯಾಹ್ನ 2021-22ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಈ ಮೂಲಕ ೮ನೇ ಬಾರಿಗೆ ಬಜೆಟ್ ಮಂಡನೆಗೆ ಸಿಎಂ ಬಿಎಸ್ ವೈ ಸಿದ್ಧರಾಗಿದ್ದಾರೆ. ಅಲ್ಲದೆ, ಈ ಅವಧಿಯ ಮೂರನೇ ಬಜೆಟ್ ಮಂಡಿಸಲು ರೆಡಿಯಾಗಿದ್ದಾರೆ.
ಯಡಿಯೂರಪ್ಪ ಅವರು ಜುಲೈ 26, 2019 ರಂದು ನಾಲ್ಕನೇ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಿಂದಿನ ಕುಮಾರಸ್ವಾಮಿ ಸರಕಾರ ಮಂಡಿಸಿ ಬಜೆಟ್ ನಲ್ಲಿ ಅಲ್ಪ ತಿದ್ದುಪಡಿಗಳನ್ನು ಮಾಡಿಕೊಂಡು ಜುಲೈ 29, 2019 ರಂದು ಧ್ವನಿ-ಮತದಿಂದ ಅಂಗೀಕರಿಸಿದ್ದರು.
ಆ ಬಳಿಕ "2020-21ರ ಹಣಕಾಸು ವರ್ಷಕ್ಕೆ ಮುಖ್ಯಮಂತ್ರಿ ಬಿಎಸ್ ವೈ ಅವರು 2020 ರ ಮಾರ್ಚ್ 5ರಂದು ಆಡಳಿತಾರೂಡ ಬಿಜೆಪಿ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಡಿಸಿದರು. ಕಳೆದ ವರ್ಷ ಮಾರ್ಚ್ ಮಧ್ಯದಲ್ಲಿ ಸಾಂಕ್ರಾಮಿಕ ರೋಗವು ರಾಜ್ಯವನ್ನು ಅಪ್ಪಳಿಸುವ ಮೊದಲು ಇದನ್ನು ಅಂಗೀಕರಿಸಲಾಯಿತು" ಎಂದು ಅಧಿಕಾರಿ ನೆನಪಿಸಿಕೊಂಡರು.
ಇನ್ನು ಈ ಬಾರಿಯ ಬಜೆಟ್, ಅಭಿವೃದ್ಧಿ ಕಾರ್ಯಗಳು ಮತ್ತು ಮಹಿಳಾ ಕಲ್ಯಾಣಕ್ಕೆ ಹೆಚ್ಚಿನ ಗಮನ ಹರಿಸುವ ನಿರೀಕ್ಷೆಯಿದೆ. "ರಾಜ್ಯ ಬಜೆಟ್ ಅಭಿವೃದ್ಧಿ ಕಾರ್ಯಗಳು ಮತ್ತು ಮಹಿಳಾ ಕಲ್ಯಾಣಕ್ಕೆ ಆದ್ಯತೆ ನೀಡಲಿದೆ. ಇದು ರಾಜ್ಯದ ಎಲ್ಲ ಮಹಿಳೆಯರಿಗೆ ನನ್ನ ಭರವಸೆ" ಎಂದು ಯಡಿಯೂರಪ್ಪ ವಾರದ ಹಿಂದೆ ತಮ್ಮ ತವರು ಜಿಲ್ಲೆಯಾದ ಶಿವಮೊಗ್ಗದ ಸೊರಬಾದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದರು. ಈ ಹಿನ್ನೆಲೆ ಅವರು ಮಂಡಿಸಲಿರುವ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.
ಮಾರ್ಚ್ 4 ರಿಂದ ಪ್ರಾರಂಭವಾದ ರಾಜ್ಯ ವಿಧಾನಸಭೆಯ ಅಧಿವೇಶನ ಒಂದು ತಿಂಗಳ ಅವಧಿಯಲ್ಲಿ ನಡೆಯಲಿದ್ದು, ಬಜೆಟ್ ಅಧಿವೇಶನವು ಏಪ್ರಿಲ್ 1ರಂದು ಕೊನೆಗೊಳ್ಳಲಿದೆ. ಈ ನಡುವೆ ತಿಂಗಳ ಅಂತ್ಯದ ವೇಳೆಗೆ ಬಜೆಟ್ ಅನ್ನು ಅಂಗೀಕರಿಸುವ ನಿರೀಕ್ಷೆಯಿದೆ.