ಬೆಂಗಳೂರು, ಮಾ. 07 (DaijiworldNews/SM): ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರು ವಾಪಸ್ ಪಡೆದ ಹಿನ್ನೆಲೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣವನ್ನು ಕೈ ಬಿಡಬಾರದೆಂದು ಮನವಿ ಮಾಡಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು. ಹಾಗೂ ತನಿಖೆ ನಡೆಸಬೇಕು. ಅಲ್ಲದೆ ಪ್ರಕರಣವನ್ನು ಕೈಬಿಡಬಾರದೆಂದು ಮನವಿ ಮಾಡಿದ್ದಾರೆ. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿಯಿದೆ. ಸರ್ಕಾರವೇ ಈ ಪ್ರಕರಣದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬಹುದು ಎಂದರು.
ಇನ್ನು ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆಯಲು ಯಾರು ಪ್ರೇರಣೆ ಎಂಬುದನ್ನು ತಿಳಿದುಕೊಳ್ಳಬೇಕು. ಸಂತ್ರಸ್ತ ಮಹಿಳೆ ಅನ್ಯಾಯವಾಗಿದೆ ಎಂದು ಏಕೆ ಹೊರಗಡೆ ಬಂದಿಲ್ಲ. ಆದರೂ ಪ್ರಕರಣವನ್ನು ಹಿಂಪಡೆಯಲಾಗಿದೆ. ಈ ವಿಚಾರದ ಸತ್ಯತೆ ಏನು ಎಂಬುವುದು ಜನರ ಮುಂದೆ ಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.