ರಾಂಚಿ, ಮಾ.07 (DaijiworldNews/HR): "ಪ್ರಧಾನಿ ನರೇಂದ್ರ ಮೋದಿಯವರಿಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿ ಮಾಡಲು ಸಮಯವಿಲ್ಲ, ಆದರೆ ಕೋಲ್ಕತ್ತಗೆ ಹೋಗಿ ರ್ಯಾಲಿ ನಡೆಸಲು ಸಮಯವಿದೆ" ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಭಾತೃತ್ವ ಸ್ಥಾಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ದೇಶದಲ್ಲಿ ಕೋಮು ವಿಷವನ್ನು ಬಿಜೆಪಿಯು ಪಸರಿಸುತ್ತಿದೆ. ರೈತರು 100 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ವಿರುದ್ಧ ಮಾತನಾಡಲು ಕೋಲ್ಕತ್ತಗೆ ಹೋಗಲು ಪ್ರಧಾನಿಗೆ ಸಮಯವಿದೆ, ಆದರೆ ದೆಹಲಿಯಲ್ಲಿರುವ ರೈತರನ್ನು ಭೇಟಿ ಮಾಡಲು ಸಮಯವಿಲ್ಲ" ಎಂದು ಆರೋಪಿಸಿದ್ದಾರೆ.
ಇನ್ನು "ಬಿಜೆಪಿ ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಪ್ರತಿಪಕ್ಷಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರಿ ಏಜೆನ್ಸಿಗಳನ್ನು ಬಳಕೆ ಮಾಡುತ್ತಿದೆ" ಎಂದು ಆರೋಪಿಸಿದರು.