ನವದೆಹಲಿ, ಮಾ.07 (DaijiworldNews/PY): ಟೆಕ್ರಿ ಗಡಿಯಲ್ಲಿನ ಪ್ರತಿಭಟನಾ ಸ್ಥಳದಿಂದ 7 ಕಿ.ಮೀ ದೂರದಲ್ಲಿ ಪ್ರದೇಶದಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
"ಹರಿಯಾಣದ ಹಿಸಾರ್ ಜಿಲ್ಲೆಯ 49 ವರ್ಷದ ರೈತ ಆತ್ಮಹತ್ಯೆ ರವಿವಾರ ಮಾಡಿಕೊಂಡಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
"ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳ ವಿರುದ್ದದ ಆಂದೋಲನವನ್ನು ರೈತ ಬೆಂಬಲಿಸಿದ್ದು, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
"ಮೃತ ರೈತ ರಾಜ್ಬೀರ್ ಹಿಸಾರ್ ಜಿಲ್ಲೆಯ ಹಳ್ಳಿಯವರು. ಟೆಕ್ರಿ ಗಡಿಯಲ್ಲಿನ ಪ್ರತಿಭಟನಾ ಸ್ಥಳದಿಂದ 7 ಕಿ.ಮೀ ದೂರದಲ್ಲಿ ಪ್ರದೇಶದಲ್ಲಿರುವ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ" ಎಂದು ಬಹದ್ದೂರ್ ಗರ್ ಸಿಟಿ ಪೊಲೀಸ್ ಠಾಣೆ ಎಸ್ಎಸ್ಒ ವಿಜಯ್ ಕುಮಾರ್ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಡೆತ್ನೋಟ್ನಲ್ಲಿ, "ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳು ನನ್ನ ಸಾವಿಗೆ ಕಾರಣ. ನನ್ನ ಸಾವಿನ ಬಳಿಕವಾದರೂ ಈ ಕಾಯ್ದೆಗಳನ್ನು ಸರ್ಕಾರ ಹಿಂಪಡೆದು ರೈತರಿಗೆ ನೆರವಾಗಬೇಕು" ಎಂದು ಬರೆದಿರುವುದಾಗಿ ವರದಿಗಳು ತಿಳಿಸಿವೆ.
ಈ ಹಿಂದೆ ಹರಿಯಾಣದ ಜಿಂದ್ನ ರೈತ ಕೂಡಾ ಟೆಕ್ರಿ ಗಡಿ ಪ್ರತಿಭಟನಾ ಸ್ಥಳದಿಂದ ಎರಡು ಕಿಲೋ ಮೀಟರ್ ದೂರದಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಗಿ ವರದಿಯಾಗಿತ್ತು.