ನವದೆಹಲಿ, ಮಾ.07 (DaijiworldNews/PY): "ಅತೀ ಹೆಚ್ಚು ಕಲುಷಿತ ಸ್ಥಳಗಳನ್ನು ಹೊಂದಿರುವ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೂರನೆ ಸ್ಥಾನದಲ್ಲಿದೆ" ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
"ದೇಶದಲ್ಲಿ ವಿಷಕಾರಿ ಹಾಗೂ ಅಪಾಯಕಾರಿ ವಸ್ತುಗಳಿಂದ ಕಲುಷಿತಗೊಂಡ 112 ತಾಣಗಳನ್ನು ಗುರುತಿಸಲಾಗಿದೆ. ಸಿಪಿಸಿಬಿಯ ಪ್ರಕಾರ, 168 ಸ್ಥಳಗಳು ಕಲುಷಿತವಾಗಿರಬಹುದು. ಆದರೆ, ಈ ಬಗ್ಗೆ ತನಿಖೆ ಹಾಗೂ ದೃಢೀಕರಣದ ಅಗತ್ಯವಿದೆ" ಎಂದು ಹೇಳಿದೆ.
"ಕಲುಷಿತ 23 ಸ್ಥಾನಗಳೊಂದಿಗೆ ಒಡಿಶಾ ಪ್ರಥಮ ಸ್ಥಾನದಲ್ಲಿದ್ದರೆ, 21 ಕಲುಷಿತ ಸ್ಥಾನಗಳೊಂದಿಗೆ ಉತ್ತರಪ್ರದೇಶ ಹಾಗೂ 11 ಕಲುಷಿತ ಸ್ಥಳಗಳೊಂದಿಗೆ ದೆಹಲಿ ಮೂರನೇ ಸ್ಥಾನದಲ್ಲಿದೆ. ವಾಜಿರ್ಪುರದ ಕೈಗಾರಿಕಾ ಪ್ರದೇಶ ಸೇರಿಂತೆ ಭಲ್ಸ್ವಾ, ನ್ಯೂ ಫ್ರೆಂಡ್ಸ್ ಕಾಲೊನಿ, ಗಾಜಿಪುರ, ದಿಲ್ಶಾದ್ ಗಾರ್ಡನ್, ಲಾರೆನ್ಸ್ ರಸ್ತೆ ಹಾಗೂ ಜಿಲ್ಮಿಲ್ ಸೇರಿ ಒಟ್ಟು 11 ಕಲುಷಿತ ತಾಣಗಳು ದೆಹಲಿಯಲ್ಲಿವೆ. ಇದಲ್ಲದೇ, ದೆಹಲಿಯಲ್ಲಿ ಇನ್ನೂ ಕೂಡಾ 12 ತಾಣಗಳು ಕಲುಷಿತಗೊಂಡಿರುವ ಸಾಧ್ಯತೆ ಇದೆ" ಎಂದು ಸಿಪಿಸಿಬಿ ತಿಳಿಸಿದೆ.
"ಕೇಂದ್ರ ಪರಿಸರ ಸಚಿವಾಲಯದ ಪ್ರಕಾರ, ಕಲುಷಿತ ತಾಣಗಳು ಮಾನವ ನಿರ್ಮಿತವಾಗಿದ್ದು, ಮಾನವ ಉಪಯೋಗಿಸಿದ ವಸ್ತುಗಳು ವಿಷಕಾರಿ ಹಾಗೂ ಅಪಾಯಕಾರಿಯಾಗಿ ಮಾರ್ಪಾಡಾಗುತ್ತಿವೆ. ಇದು ಮಾನವನ ಆರೋಗ್ಯದ ಮೇಲೆ ಹಾಗೂ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ" ಎಂದಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದ ಮೇರೆಗೆ ಗುಜರಾತ್, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ ಏಳು ರಾಜ್ಯದ 14 ಕಲುಷಿತ ಸ್ಥಳಗಳಲ್ಲಿ ಪರಿಹಾರ ಕಾರ್ಯವನ್ನು ಪ್ರಾರಂಭಿಸಲಾಗಿದೆ.