ಬೆಂಗಳೂರು, ಮಾ.07 (DaijiworldNews/HR): "ನನ್ನ ಸಿಡಿ ಇದ್ದರೆ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಿ, ಸಿಡಿ ಬಿಡುಗಡೆ ಮಾಡುವವರಿಗೆ ಸ್ವಾಗತ" ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಪ್ರಕರಣ, ಹಾಗೂ 6 ಸಚಿವರು ಕೋರ್ಟ್ ಮೊರೆ ಹೋದ ಕುರಿತು ಸಂಬಂಧಿಸಿದಂತೆ ಮಾತನಾಡಿದ್ದು, "ನಾನು ಕೋರ್ಟ್ ಮೆಟ್ಟಿಲು ಹತ್ತುವುದಿಲ್ಲ, ಯಾಕೆಂದರೆ ನನಗೆ ಯಾವುದೇ ಭಯವೂ ಇಲ್ಲ. ನನ್ನ ಸಿಡಿ ಇದ್ದರೆ, ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಿ" ಎಂದು ಸವಾಲು ಹಾಕಿದ್ದಾರೆ.
ಇನ್ನು "ಯಾರಾದರೂ ನನ್ನ ಸಿಡಿ ಇದೆ ಎಂದು ಹೇಳಿದರೆ, ನಾನು ತಡೆಯಾಜ್ಞೆ ತರುವುದಿಲ್ಲ. ಕೂಡಲೇ ಅದನ್ನು ಬಿಡುಗಡೆ ಮಾಡಿ. ಇದೊಂದು ವ್ಯವಸ್ಥಿತವಾದ ಸಂಚಾಗಿದ್ದು, ಸಿಲುಕಿಸಲೇ ಬೇಕು ಎಂದು ಸಿಲುಕಿಸಿರುವ ಪ್ರಕರಣವಿದು" ಎಂದು ಹೇಳಿದ್ದಾರೆ.