ಹುಬ್ಬಳ್ಳಿ, ಮಾ.07 (DaijiworldNews/PY): "ಸಿಎಂ ಆಸೆಗಾಗಿ ಬಡಿದಾಡಿಕೊಳ್ಳುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೋಡೆತ್ತುಗಳಲ್ಲ, ಅವರು ಕಾದಾಟದ ಹೋರಿಗಳು" ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಕೈವಾಡವಿದ್ದು, ಕೈ ನಾಯಕರ ಹಾಗೂ ಕೆಲವು ಸಂಘ-ಸಂಸ್ಥೆಗಳ ಹೆಸರು ಕೇಳಿ ಬರುತ್ತಿದೆ. ಯಾರೆಲ್ಲಾ ಈ ಪಿತೂರಿಯಲ್ಲಿ ಶಾಮೀಲಾಗಿದ್ದಾರೆ ಎಂದು ತನಿಖೆಯಿಂದ ತಿಳಿಯಬೇಕಿದೆ" ಎಂದರು.
"ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಬಿಜೆಪಿಗೆ ಸೇರ್ಪಡೆಯಾದ ಶಾಸಕರ ತೇಜೋವಧೆಯ ಯತ್ನ ನಡೆಯುತ್ತಿದೆ. ಹಾಗಾಗಿ ಆರು ಸಚಿವರು ನ್ಯಾಯಾಲಯದಿಂದು ತಡೆಯಾಜ್ಞೆ ತಂದಿದ್ದಾರೆ. ಸಿ.ಡಿ ಎಂದಕೂಲೇ ರಾಸಲೀಲೆ, ಹನಿಟ್ರ್ಯಾಪ್ ಅಲ್ಲ. ಸಿ.ಡಿಯಲ್ಲಿ ದಾಖಲಾತಿ ಹಾಗೂ ಫೋನ್ ಸಂಭಾಷಣೆಯ ವಿಷಯ ಕೂಡಾ ಇರಬಹುದು" ಎಂದು ಹೇಳಿದರು.
"ಸಿ.ಡಿ ಬಹಿರಂಗವಾಗಿ ತೇಜೋವಧೆಯಾದ ಬಳಿಕ ನಾಯಕರ ಗೌರವ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಹಾಗೂ ಸಚಿವರ ಹೆಸರನ್ನು ಕಡೆಸುವ ಯತ್ನ ನಡೆಯುತ್ತಿದೆ" ಎಂದರು.
"ರಾಜ್ಯದಲ್ಲಿ ಶ್ರೀರಾಮುಲುವಿನ ಶಕ್ತಿ ಕಡಿಮೆಯಾಗಿಲ್ಲ. ನಾನು ರಾಜ್ಯ ಪ್ರವಾಸ ಮಾಡುತ್ತಾ, ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿದ್ದೇನೆ. ಸ್ಥಾನಮಾನ ನೀಡುವ ವಿಚಾರವಾಗಿ ನಾನು ಏನನ್ನೂ ಬಯಸುವುದಿಲ್ಲ" ಎಂದು ಹೇಳಿದರು.