ಅಯೋಧ್ಯೆ, ಮಾ.07 (DaijiworldNews/MB): "ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನವು ವಿಶ್ವದ ಅತಿದೊಡ್ಡ ನಿಧಿಸಂಗ್ರಹ ಅಭಿಯಾನವಾಗಿತ್ತು. ಜನರು ಇನ್ನು ಕೂಡಾ ಹೊಸ ಟ್ರಸ್ಟ್ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ದೇಣಿಗೆ ನೀಡಬಹುದಾಗಿದೆ. ವಿದೇಶದಲ್ಲಿರುವ ಭಕ್ತರು ಸ್ವಲ್ಪ ಕಾಯಬೇಕಾಗಿದೆ. ಎಫ್ಸಿಆರ್ಎ ಕೆಲವು ಪ್ರಕ್ರಿಯೆಗಳು ಪೂರ್ಣಗೊಳಿಸಿದ ನಂತರ ಅವರಿಗೆ ಸೂಚಿಸಲಾಗುತ್ತದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದರು.
ಫೆಬ್ರವರಿ 4 ರವರೆಗೆ ಬ್ಯಾಂಕ್ ರಶೀದಿಗಳ ಆಧಾರದ ಮೇಲೆ ದೇವಾಲಯ ನಿರ್ಮಾಣಕ್ಕಾಗಿ ದೇಣಿಗೆ 2,500 ಕೋಟಿ ರೂ. ಸಂಗ್ರಹವಾಗಿದೆ ಎಂದು ಕೂಡಾ ಮಾಹಿತಿ ನೀಡಿದರು.
"ದೇಶಾದ್ಯಂತ ಮನೆ ಬಾಗಿಲಿಗೆ ತೆರಳಿ ದೇಣಿಗೆ ಸಂಗ್ರಹಿಸಲು ಸುಮಾರು 9 ಲಕ್ಷ ವಿಎಚ್ಪಿ ಕಾರ್ಯಕರ್ತರನ್ನು 1.75 ಲಕ್ಷ ತಂಡಗಳಾಗಿ ವಿಂಗಡಿಸಲಾಗಿತ್ತು. 38,125 ಸ್ವಯಂಸೇವಕರು ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಿದ್ದಾರೆ. ಪಾರದರ್ಶಕತೆ ಕಾಪಾಡಿಕೊಳ್ಳಲು 49 ನಿಯಂತ್ರಣ ಕೊಠಡಿಗಳು 23 ಅರ್ಹ ಸ್ವಯಂಸೇವಕರೊಂದಿಗೆ ದಿನವಿಡೀ ಕಾರ್ಯ ನಿರ್ವಹಿಸುತ್ತಿತ್ತು. ಚಾರ್ಟರ್ಡ್ ಅಕೌಂಟೆಂಟ್ಗಳು ದೆಹಲಿಯ ನೋಡಲ್ ಕೇಂದ್ರದಿಂದ ಲೆಕ್ಕಾಚಾರ ನೋಡಿಕೊಳ್ಳುತ್ತಾರೆ'' ಎಂದು ವಿವರಿಸಿದರು.
''ನಿಧಿಸಂಗ್ರಹ ಅಭಿಯಾನದ ಲೆಕ್ಕಪರಿಶೋಧನೆಯು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ'' ಎಂದು ಕೂಡಾ ತಿಳಿಸಿದರು. "ಭಕ್ತರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ. ಈಶಾನ್ಯದಿಂದ ಅರುಣಾಚಲ ಪ್ರದೇಶದ ಜನರು 4.5 ಕೋಟಿ ರೂ., ಮಣಿಪುರ 2 ಕೋಟಿ ರೂ., ಮಿಜೋರಾಂ 0.2 ಕೋಟಿ, ನಾಗಾಲ್ಯಾಂಡ್ 0.3 ಕೋಟಿ ರೂ., ಮೇಘಾಲಯ ರೂ. 0.9 ಕೋಟಿ. ತಮಿಳುನಾಡಿನ ಭಕ್ತರು 85 ಕೋಟಿ ಮತ್ತು ಕೇರಳ 13 ಕೋಟಿ ರೂ. ನೀಡದ್ದಾರೆ'' ಎಂದು ಹೇಳಿದರು.
ಕಳೆದ ವಾರ ಕೊನೆಗೊಂಡ ರಾಮ ಮಂದಿರ ಸಮೂಹ ದೇಣಿಗೆ ಸಂಗ್ರಹವು ಭಾರತದಾದ್ಯಂತ 4 ಲಕ್ಷ ಹಳ್ಳಿಗಳಲ್ಲಿ 10 ಕೋಟಿ ಕುಟುಂಬಗಳನ್ನು ತಲುಪಿದೆ.