ನವದೆಹಲಿ, ಮಾ.07 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರ ಕಲ್ಯಾಣಕ್ಕಾಗಿ ಬದ್ಧವಾಗಿದ್ದು, ನಾವು ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ, ಆದರೇ ಕೃಷಿ ಕಾನೂನುಗಳು ದೋಷಯುಕ್ತವಾಗಿದೆ ಎಂದು ಯಾರೂ ಹೇಳಬಾರದು. ಅದಕ್ಕೆ ಉತ್ತರವನ್ನು ನೀಡುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ" ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೃಷಿ ಕಾಯ್ದೆಗಳ ಬಗ್ಗೆ ವಿಮರ್ಶೆ ಮಾಡುತ್ತಿರುವವರಿಗೆ ಮತ್ತು ವಿರೊಧ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, "ರೈತರೊಂದಿಗೆ ನಡೆಸಿದ ಮಾತುಕತೆಯ ಸಂದರ್ಭದಲ್ಲಿ ತಿದ್ದುಪಡಿಯ ಭವಿಷ್ಯದ ಬಗ್ಗೆ ನಾನು ವಿವರಿಸಿದ್ದೇನೆ, ತಿದ್ದುಪಡಿಯ ಪ್ರಸ್ತಾಪಗಳು ಕಾನೂನುಗಳಲ್ಲಿ ದೋಷವಿದೆ ಎಂಬರ್ಥವಲ್ಲ" ಎಂದರು.
ವಿರೋಧ ಪಕ್ಷಗಳು ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಸಂಸತ್ತಿನಲ್ಲಿ ಸರ್ಕಾರದ ಧ್ಯೇಯ ಹಾಗೂ ಉದ್ದೇಶಗಳ ಬಗ್ಗೆ ನಾನು ಸಂಪೂರ್ಣವಾಗಿ ವಿವರಿಸಿದ್ದೇನೆ. ವಿರೋಧ ಪಕ್ಷದವರ ಅಭಿಪ್ರಾಯಗಳನ್ನು ನಾವು ಆಲಿಸಿದ್ದೇವೆ. ಅಧ್ಯಕ್ಷರ ಭಾಷಣದ ನಂತರವೂ ವಿರೋಧ ಪಕ್ಷದವರು ರೈತರ ಪ್ರತಿಭಟನೆಯ ಬಗ್ಗೆ ಮಾತ್ರ ಮಾಡುತ್ತಾರೆ ಹೊರತಾಗಿ ಕಾನೂನಿನ ಬಗ್ಗೆ ಮಾತನಾಡುವುದಿಲ್ಲ" ಎಂದಿದ್ದಾರೆ.
ಇನ್ನು "ಬದಲಾವಣೆಗಳನ್ನು ತಂದಾಗ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಕಷ್ಟವಾಗುತ್ತದೆ. ಕೆಲವರು ಅದನ್ನು ಟೀಕೆ ಮಾಡುತ್ತಾರೆ, ಕೆಲವರು ಪ್ರತಿಭಟಿಸುತ್ತಾರೆ. ಬದಲಾವಣೆಯ ಹಿಂದೆ ಉತ್ತಮವಾದ ನೀತಿ ಮತ್ತು ಉದ್ದೇಶವಿದ್ದರೆ ಜನರು ಅದನ್ನು ಖಂಡಿತವಾಗಿ ಒಪ್ಪುತ್ತಾರೆ" ಎಂದು ಹೇಳಿದ್ದಾರೆ.