ಧಾರವಾಡ, ಮಾ.07 (DaijiworldNews/MB): ದಂಪತಿಗಳು ಸಾಲ ತೀರಿಸಿಲ್ಲವೆಂದು ದುಷ್ಟರು ಅವರನ್ನು ಅಕ್ರಮ ಬಂಧನದಲ್ಲಿರಿಸಿದ್ದು ಮಾತ್ರವಲ್ಲದೆ, ದಂಪತಿಯ ಒಂದು ತಿಂಗಳ ಗಂಡು ಮಗುವನ್ನು 2.50 ಲಕ್ಷ ರೂ.ಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಧಾರವಾಡ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ.
ಧಾರವಾಡದ ಭಾರತಿ ಮಂಜುನಾಥ ವಾಲ್ಮೀಕಿ, ರಮೇಶ ಮಂಜುನಾಥ ವಾಲ್ಮೀಕಿ, ರವಿ ಭೀಮಸೇನ ಹೆಗಡೆ, ವಿನಾಯಕ ಅರ್ಜುನ ಮಾದರ ಎಂಬವರನ್ನು ಮೀಟರ್ ಬಡ್ಡಿಗೆ ಸಾಲ ನೀಡುವುದು ಮಾತ್ರವಲ್ಲದೆ ಮಗುವನ್ನು ಮಾರಾಟ ಮಾಡಿದ ಆರೋದಲ್ಲಿ ಹಾಗೂ ಉಡುಪಿಯ ವಿಜಯ ನೆಗಳೂರ ಮತ್ತು ಚಿತ್ರಾ ನೆಗಳೂರ ದಂಪತಿಯನ್ನು ಮಗುವನ್ನು ಖರೀದಿಸಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳು ಧಾರವಾಡದ ದಂಪತಿಗೆ ಮೀಟರ್ ಬಡ್ಡಿಯಲ್ಲಿ ಸಾಲ ನೀಡಿದ್ದು ಆ ಸಾಲ ಹಿಂತಿರುಗಿಸಲು ಒತ್ತಡ ಹೇರಿದ್ದರು. ದಂಪತಿಗಳು ಸಾಲ ತೀರಿಸಿಲ್ಲವೆಂದು ಅವರನ್ನು ಅಕ್ರಮ ಬಂಧನದಲ್ಲಿ ಇರಿಸಿದ್ದು ಮಾತ್ರವಲ್ಲದೆ, ಮಗುವನ್ನು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿ ಬಳಿಕ ಮಗುವನ್ನು ಉಡುಪಿಯ ವಿಜಯ-ಚಿತ್ರಾ ದಂಪತಿಗೆ ಮಾರಾಟ ಮಾಡಿದ್ದಾರೆ. ತಮ್ಮ ಮಗುವನ್ನು ನಮಗೆ ವಾಪಾಸ್ ಕೊಡಿಸಿ ಎಂದು ದಂಪತಿ ಧಾರವಾಡ ವಿದ್ಯಾಗಿರಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.