ಚಿತ್ರದುರ್ಗ, ಮಾ.07 (DaijiworldNews/PY): ದೇವಾಲಯದ ಬಳಿ ಪ್ರಸಾದ ಹಾಗೂ ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ ನಡೆದು, ಪೂಜಾರಿಯೋರ್ವರು ದೇವಾಲಯದ ದಾಸಯ್ಯನ ಮೇಲೆ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ತೋಪಿನ ಗೊಲ್ಲಹಳ್ಳಿ ಗ್ರಾಮದ ಗೊಲ್ಲಾಳಮ್ಮ ದೇವಾಲಯದ ಬಳಿ ನಡೆದಿದೆ.
ಗಾಯಗೊಂಡಿರುವ ದಾಸಯ್ಯರನ್ನು ಶೇಖರ್ (34) ಎಂದು ಗುರುತಿಸಲಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸಾದ ಹಾಗೂ ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಪೂಜಾರಿಗಳು ಹಾಗೂ ದಾಸಯ್ಯರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ದಾಸಯ್ಯರ ಮೇಲೆ ಪೂಜಾರಿ ಕಾಯಿ ಒಡೆಯುವ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೂಜಾರಿ ಭರತ್, ಪುಂಡಲೀಕ ಹಾಗೂ ಮತ್ತಿತರರ ವಿರುದ್ದ ಹಲ್ಲೆ ಆರೋಪ ಮಾಡಲಾಗಿದೆ.
ದೇವಸ್ಥಾನದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ ಎಂದು ತಿಳಿದುಬಂದಿದೆ.