ಬೆಂಗಳೂರು, ಮಾ.07 (DaijiworldNews/PY): ಹತ್ಯೆಗೆ ಯತ್ನಿಸಿದ್ದ ಪ್ರಕರಣ ಆರೋಪಿಯೋರ್ವನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಆರೋಪಿಯನ್ನು ಲಗ್ಗೆರೆ ನಿವಾಸಿ ರೌಡಿ ಕಿರಣ್ ಅಲಿಯಾಸ್ ಚಡ್ಡಿ ಎಂದು ಗುರುತಿಸಲಾಗಿದೆ.
"ಆರೋಪಿ ಕಿರಣ್ ಅನ್ನು ಬಂಧಿಸಲು ಹೋದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ರಾಜಗೋಪಾಲ್ ನಗರ ಠಾಣೆ ಪಿಎಸ್ಐ ನವೀದ್, ರೌಡಿಯ ಕಾಲಿಗೆ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಿದ್ದಾರೆ" ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
"ಆರೋಪಿ ಕಿರಣ್ ಹಾಗೂ ಆತನ ಸಹಚರರ ವಿರುದ್ದ ಹತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆತ ಜೈಲಿಗೆ ಹೋಗಿದ್ದು, ಜಾಮೀನು ಮೇರೆಗೆ ಹೊರಬಂದಿದ್ದ. ಆರೋಪಿ ಕಿರಣ್ ಹಾಗೂ ಆತನ ಸಹಚರರು ಮಾ.2ರಂದು ವಿನೋದ್ ಹಾಗೂ ಅವರ ಕುಟುಂದವರ ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪಿಎಸ್ಐ ನವೀದ್ ಹಾಗೂ ಸಿಬ್ಬಂದಿ ಶೋಧ ನಡೆಸುತ್ತಿದ್ದರು" ಎಂದಿದ್ದಾರೆ.
"ರೌಡಿ ಕಿರಣ್ ರವಿವಾರ ನಸುಕಿನಲ್ಲಿ ಲಗ್ಗೆರೆ ಸೇತುವೆ ಬಳಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಬಗ್ಗೆ ಮಾಹಿತಿ ದೊರೆತಿದ್ದು, ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಶರಣಾಗುವಂತೆ ತಿಳಿಸಿದ್ದರು. ಆದರೆ, ಆತ ಹಾಗೂ ಆತನ ಸಹಚರರು ದ್ವಿಚಕ್ರ ವಾಹನವನ್ನು ವೇಗವಾಗಿ ಚಲಾಯಿಸಿಕೊಂಡಿ ಹೋಗಿದ್ದಾರೆ. ಆರೋಪಿಯನ್ನು ಪೊಲೀಸರು ಬೆನ್ನಟ್ಟಿದ್ದು, ಮಾರ್ಗದ ನಡುವೆ ರೌಡಿಯನ್ನು ಹಿಡಿಯಲು ಕಾನ್ಸ್ಟೆಬಲ್ ಬಸವಣ್ಣ ಮುಂದಾಗಿದ್ದಾರೆ. ಈ ವೇಳೆ ರೌಡಿ ಕಿರಣ್ ಸಹೋದರ ದಾಸ್ ಎಂಬಾತ ಕಾನ್ಸ್ಟೆಬಲ್ ಕೈಗೆ ಚೂರಿಯಿಂದ ಇರಿದಿದ್ದು, ಕಿರಣ್ ಕೂಡಾ ದಾಳಿ ಮಾಡಲು ಮುಂದಾಗಿದ್ದ. ಈ ಸಂದರ್ಭ ಪಿಎಸ್ಐ ರೌಡಿಯ ಬಲಗಾಲಿಗೆ ಗುಂಡು ಹಾರಿಸಿದ್ದು, ರೌಡಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕಾನ್ಸ್ಟೇಬಲ್ ಕೂಡಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಹೇಳಿದ್ದಾರೆ.