ಮೈಸೂರು, ಮಾ.07 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ದವಾಗಿ ಘೋಷಣೆ ಕೂಗಿದ್ದ ಆರು ಮಂದಿ ಕೈ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಾಸಕ ತನ್ವೀರ್ ಸೇಠ್ ಜೊತೆ ಭಿನ್ನಾಭಿಪ್ರಾಯ ಕಾಣಿಸಿಕೊಂಡು ಕೋಪಗೊಂಡಿರುವ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸುವ ಸಲುವಾಗಿ ಹೀಗೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ, ಪಕ್ಷದಿಂದ ಕಾರ್ಯಕರ್ತರನ್ನು ಮೈಸೂರು ನಗರ ಕಾಂಗ್ರೆಸ್ ಸಮಿತಿ ಸದಸ್ಯರು ಉಚ್ಛಾಟನೆ ಮಾಡಿರುವ ವಿಚಾರದ ಬಗ್ಗೆ ಮೌನವಹಿಸಿದ್ದಾರೆ.
ಕಳೆದ ತಿಂಗಳಿನಲ್ಲಿ ನಡೆದ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ನಂತರ ಕಾಂಗ್ರೆಸ್ನಲ್ಲಿರುವ ಭಿನ್ನಮತ ಹೊರ ಬಂದಿತ್ತು. ಜೆಡಿಎಸ್ಗೆ ಕಾಂಗ್ರೆಸ್ ಮೇಯರ್ ಸ್ಥಾನವನ್ನು ಬಿಟ್ಟುಕೊಡಲಾಗಿದೆ ಎಂದು ಕೆಲ ನಾಯಕರು ಆರೋಪಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಂಡಿವೆ. ಜೆಡಿಎಸ್ಗೆ ಮೇಯರ್ ಸ್ಥಾನ ಧಕ್ಕಿದ್ದು, ಉಪಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು.
ತನ್ವೀರ್ ಸೇಠ್ ಅವರು ಏಕಪಕ್ಷೀಯ ತೀರ್ಮಾನ ಕೈಗೊಂಡಿದ್ದು, ಅವರಿಗೆ ಪಕ್ಷ ನೊಟೀಸ್ ಜಾರಿ ಮಾಡಬೇಕು ಎಂದು ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಒತ್ತಾಯಿಸಿದ್ದರು. ತನ್ವೀರ್ ಸೇಠ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಸಿದ್ದರಾಮಯ್ಯ ಅವರ ಬೆಂಬಲಿಗರು ಆಗ್ರಹಿಸಿದ್ದರು. ಇದಾದ ನಂತರ ಮೈಸೂರಿಗೆ ಪರಿಸ್ಥಿತಿ ಪರಾಮರ್ಶಿಸುವ ಸಲುವಾಗಿ ಎಐಸಿಸಿಯ ವೀಕ್ಷಕರೋರ್ವರನ್ನು ಕಳುಹಿಸಲಾಗಿತ್ತು. ತನ್ವೀರ್ ಸೇಠ್ ಅವರಿಗೆ ನೊಟೀಸ್ ಜಾರಿ ಮಾಡಲಾಗಿತ್ತು.
ತನ್ವೀರ್ ಸೇಠ್ ಅವರಿಗೆ ನೊಟೀಸ್ ಜಾರಿ ಮಾಡಿದ ಕಾರಣ, ಅವರ ಬೆಂಬಲಿಗರು ಕೋಪಗೊಂಡಿದ್ದು, ಸಿದ್ದರಾಮಯ್ಯ ಅವರ ವಿರುದ್ದ ಘೋಷಣೆ ಕೂಗಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು ಎಂದು ತಿಳಿಸಿದ್ದರು. ಪಕ್ಷದಿಂದ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್ ಮೂರ್ತಿ ಅವರು ಶಾಹಿದ್, ಎಂ ಎನ್ ಲೋಕೇಶ್, ಅಬೀಬ್ ಹಾಗೂ ಅವರ ಇಬ್ಬರು ಪುತ್ರರನ್ನು ಉಚ್ಛಾಟಿಸಿ ಆದೇಶ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಉಚ್ಛಾಟಿತಗೊಂಡ ಆರು ಮಂದಿ ತನ್ವೀರ್ ಸೇಠ್ ಅವರ ನಿಕಟವರ್ತಿಗಳಾಗಿದ್ದಾರೆ.
ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಯತೀಂದ್ರ, "ಎಲ್ಲಾ ಮಾಹಿತಿಗಳನ್ನು ಸಂಗ್ರಹ ಮಾಡಿ ಎಐಸಿಸಿ ವೀಕ್ಷಕರು ವರದಿಯನ್ನು ಕಳುಹಿಸಿದ್ದಾರೆ. ವರದಿಯ ಪ್ರಕಾರ, ಅವರೆಲ್ಲರೂ ತಪ್ಪಿತಸ್ಥರೆಂದು ಸಾಬೀತಾದಲ್ಲಿ, ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು" ಎಂದು ತಿಳಿಸಿದ್ದಾರೆ.