ಬೆಂಗಳೂರು, ಮಾ.07 (DaijiworldNews/MB): ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋದಲ್ಲಿರುವ ಮಹಿಳೆಯ ಹುಡುಕಾಟದಲ್ಲಿ ಪೊಲೀಸರು ಇದ್ದು ಈ ಬಗ್ಗೆ ಮಾಹಿತಿ ಪಡೆಯಲು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದಾಗ ಮಹಿಳೆಯ ಬಗ್ಗೆ ಮಾಹಿತಿ ನೀಡಲು ಜಾರಕಿಹೊಳಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ ಪೊಲೀಸರು ಮಹಿಳೆಯ ಮಾಹಿತಿ ಕಲೆ ಹಾಕುವ ಯತ್ನದಲ್ಲಿದ್ದು ಬಿಜೆಪಿ ನಾಯಕನ ಜೊತೆಗಿನ ದೂರವಾಣಿ ಕರೆಗಳು, ಕಾಲ್ ರೆಕಾರ್ಡ್ ಮುಂತಾದವುಗಳ ಆಧಾರದ ಮೇಲೆ, ಸೆಕ್ಸ್ ಸಿಡಿಯಲ್ಲಿರುವ ಮಹಿಳೆ ಆರ್ ಟಿ ನಗರದಲ್ಲಿರುವ ಮಹಿಳೆಯರ ವಸತಿ ಗೃಹದಲ್ಲಿದ್ದಳು ಎಂದು ತಿಳಿದು ಬಂದಿದೆ.
ಆಕೆ 2018 ರಲ್ಲಿ ಪಿಜಿಗೆ ಸೇರಿದ್ದು ರಾಜಾಜಿನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದಳು. ಆದರೆ ಕಂಪನಿಯ ಹೆಸರು ಹೇಳಿರಲಿಲ್ಲ. ಈ ವಿಡಿಯೋ ವೈರಲ್ ಆಗುವುದಕ್ಕೂ ಮುನ್ನ ಪಿಜಿಯಿಂದ ತೆರಳಿದ್ದಾಳೆ. ಅವಳ ಬಗ್ಗೆ ಅವಳ ಇಬ್ಬರೂ ಸ್ನೇಹಿತರಿಗೂ ಮಾಹಿತಿಯಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ಮಹಿಳಾ ಹೋರಾಟಗಾರ್ತಿ ಕೆಎಚ್ ಇಂದಿರಾ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯ ವಿಡಿಯೋ ವೈರಲ್ ಮಾಡಿ ಮಹಿಳೆಯ ಕುಟುಂಬಕ್ಕೆ ಮಾನಹಾನಿ ಮಾಡಿದ ದಿನೇಶ್ ಕಲ್ಲಹಳ್ಳಿ ಮತ್ತು ತನ್ನ ಬಳಿ ಇನ್ನೂ ಸಿಡಿಗಳಿವೆ ಎಂದು ಹೇಳಿ ಮಹಿಳೆಯರ ಮಾನಹಾನಿಗೆ ಮುಂದಾಗಿರುವ ರಾಜಶೇಖರ್ ಮುಲಾಲಿ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.