ತಿರುವನಂತಪುರಂ, ಮಾ.07 (DaijiworldNews/MB): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಕೇಂದ್ರ ಸಂಸ್ಥೆಗಳಿಗೆ, ವಿಶೇಷವಾಗಿ ಕಸ್ಟಮ್ಸ್ ಹಾಗೂ ಜಾರಿ ನಿರ್ದೇಶನಾಲಯಕ್ಕೆ ವಾಗ್ದಾಳಿ ನಡೆಸಿದರು. ''ರಾಜ್ಯದಲ್ಲಿ ತೆರೆದ ಪುಸ್ತಕದಂತೆ ಪಾರದರ್ಶಕವಾಗಿರುವ ಎಡ ಸರ್ಕಾರದ ಚಿತ್ರಣವನ್ನು ಕೆಡಿಸಲು ಸಾಧ್ಯವಿಲ್ಲ'' ಎಂದು ಹೇಳಿದ್ದಾರೆ.
"ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮೂಲೆಗುಂಪಾಗಿರುವುದರಿಂದ, ಕೇಂದ್ರದ ಸಂಸ್ಥೆಗಳು ನಮ್ಮ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕೇರಳದಲ್ಲಿ ಎಡ ಸರ್ಕಾರದ ಚಿತ್ರಣವನ್ನು ಈ ಏಜೆನ್ಸಿಗಳಿಂದ ಕೆಡಿಸಲು ಸಾಧ್ಯವಿಲ್ಲ" ಎಂದು ವಿಜಯನ್ ಹೇಳಿದರು.
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್, ವಿದೇಶಿ ಹಣ ಅಕ್ರಮ ಸಾಗಾಟ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸ್ಪೀಕರ್ ಪಿ. ಶ್ರೀರಾಮಕೃಷ್ಣನ್ ಸಹಿತ ಮೂವರು 3 ಕ್ಯಾಬಿನೆಟ್ ಮಂತ್ರಿಗಳು ನಂಟು ಹೊಂದಿರುವ ಬಗ್ಗೆ ಸುಳಿವು ನೀಡಿರುವ ಬಗ್ಗೆ ಕಸ್ಟಮ್ಸ್ ಇಲಾಖೆಯ ಕಮಿಷನರ್ ಸುಮಿತ್ ಕುಮಾರ್ ಕೋರ್ಟ್ಗೆ ಸಲ್ಲಿಸಿರುವ ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರೀಯ ಸಂಸ್ಥೆಗಳ ವಿರುದ್ದ ವಾಗ್ದಾಳಿ ನಡೆಸಿರುವ ಕೇರಳ ಸಿಎಂ, ''ಈ ಕೇಂದ್ರದ ಸಂಸ್ಥೆಗಳು ಕೇಂದ್ರ ಸರ್ಕಾರದ ಆಜ್ಞೆಯಂತೆ ನಡೆಯುತ್ತಿದೆ. ಕಳೆದ ವರ್ಷ ಜುಲೈನಲ್ಲಿ ಬಂಧನವಾದ ಕೂಡಲೇ ಕೇಂದ್ರ ಏಜೆನ್ಸಿಗಳಾದ ಎನ್ಐಎ, ಕಸ್ಟಮ್ಸ್ ಮತ್ತು ಇಡಿ ಸುರೇಶನನ್ನು ದೀರ್ಘಕಾಲದವರೆಗೆ ತಮ್ಮ ವಶದಲ್ಲಿರಿಸಿಕೊಂಡಿರುವುದನ್ನು ಯಾರೂ ಮರೆಯಬಾರದು'' ಎಂದು ವಿಜಯನ್ ಹೇಳಿದ್ದಾರೆ.
"ಕೇರಳದ ಜನರು ನಮ್ಮನ್ನು ನಂಬುತ್ತಾರೆ ಎಂಬ ನಂಬಿಕೆ ನಮಗಿದೆ ಮತ್ತು ಈ ತನಿಖಾ ಸಂಸ್ಥೆಗಳಲ್ಲಿ ಒಂದು ಭಾಗದ ಜನರ ಪ್ರಯತ್ನದಿಂದಾಗಿ, ಕೇರಳ ಬಿಜೆಪಿ, ಕಾಂಗ್ರೆಸ್ನ ಪ್ರಯತ್ನಗಳಿಂದಾಗಿ ಈ ಎಲ್ಲಾ ಆಟವನ್ನು ಆಡುತ್ತಿದೆ ಎಂದು ಜನರಿಗೆ ತಿಳಿದಿದೆ. ಎಡ ಸರ್ಕಾರದ ಚಿತ್ರಣವನ್ನು ಕೆಡಿಸಲು ಕೇಂದ್ರ ಸರ್ಕಾರ ಹೊರಟಿದೆ'' ಎಂದು ಆರೋಪಿಸಿದರು.
"ನಾವು ಕೇರಳದ ಜನರ ಹೃದಯದಲ್ಲಿದ್ದೇವೆ ಮತ್ತು ಅದು ರಾಜ್ಯದ ಜನರಿಗೂ ತಿಳಿದಿದೆ. ಅದು ನಮ್ಮ ಶಕ್ತಿ. ನಾವು ಯಾರ ಮುಂದೆ ತಲೆಬಾಗುವುದಿಲ್ಲ ಮತ್ತು ನಮ್ಮ ಜೀವನವು ಹಾಗೆ ಎಂದು ಜನರಿಗೆ ತಿಳಿದಿರುವಂತೆ ನಾವು ತಲೆ ಎತ್ತಿಕೊಂಡು ತೆರೆದ ಪುಸ್ತಕದಂತೆ ನಡೆಯುತ್ತೇವೆ'' ಎಂದು ದೃಢವಾಗಿ ಹೇಳಿದರು.
ಇದಕ್ಕೂ ಮುನ್ನ ಶನಿವಾರ, ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್ವಾದಿ (ಸಿಪಿಐ-ಎಂ) ಕಾರ್ಮಿಕರು ಬೀದಿಗಿಳಿದು ಕೇಂದ್ರ ಸಂಸ್ಥೆಯ ಕ್ರಮವನ್ನು ವಿರೋಧಿಸಿ ರಾಜ್ಯ ರಾಜಧಾನಿ ಕೊಚ್ಚಿ ಮತ್ತು ಕೋಝಿಕೋಡ್ನಲ್ಲಿರುವ ಕಸ್ಟಮ್ಸ್ ಕಚೇರಿಗಳತ್ತ ಮೆರವಣಿಗೆ ನಡೆಸಿದರು.