ಕುಣಿಗಲ್, ಮಾ.07 (DaijiworldNews/MB): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯಾದ ಬೆನ್ನಲ್ಲೇ ಕೋರ್ಟ್ ಮೊರೆ ಹೋದ ಬಿಜೆಪಿ ಸರ್ಕಾರದ ಸಚಿವರನ್ನು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ. ''ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿದ್ರು'' ಎಂದು ವ್ಯಂಗ್ಯವಾಡಿದ್ದಾರೆ.
ತಾಲೂಕಿನ ಎಡೆಯೂರು ಸಮೀಪದ ಕಾಳಿಂಗನಹಳ್ಳಿ ಖಾಸಗಿ ಫಾರ್ಮ್ಹೌಸ್ನಲ್ಲಿ ಶನಿವಾರ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ಈಗ ಒಬ್ಬರ ಸಿಡಿ ಬಿಡುಗಡೆಯಾಗಿದೆ. ಆದರೆ ಬಿಜೆಪಿ ಸರ್ಕಾರದ ಬೇರೆ ಆರು ಸಚಿವರು ತಮ್ಮ ಸಿಡಿ ಬಿಡುಗಡೆಯಾದರೆ ಎಂಬ ಭಯದಿಂದ ಮೊದಲೇ ಕೋರ್ಟ್ ನೊರೆ ಹೋಗಿದ್ದಾರೆ. ಕೋರ್ಟ್ ತಡೆಯಾಜ್ಞೆ ನೀಡಿದೆ. ಅವರು ಕೋರ್ಟ್ ಮೆಟ್ಟಿಲೇರುವ ಮೂಲಕ ಅವರು ಕಳ್ಳರು ಎಂದು ಯಾರೂ ಹೇಳದಿದ್ದರೂ ಅವರೇ ಒಪ್ಪಿದಂತಾಗಿದೆ'' ಎಂದು ಲೇವಡಿ ಮಾಡಿದರು.
''ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸಬೇಕು. ಎಲ್ಲಾ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರ ಜನರ ಜೀವನದೊಂದಿಎಗ ಚೆಲ್ಲಾಟವಾಡುತ್ತಿದೆ. ಬಿಜೆಪಿ ಸರ್ಕಾರ ಇದಕ್ಕೆ ಒಂದಲ್ಲ ಒಂದು ದಿನ ಬೆಲೆ ತೆರಬೇಕಾಗುತ್ತದೆ'' ಎಂದು ಹೇಳಿದರು.
''ಸರ್ಕಾರ ಜನರ ಯಾವುದೇ ಕಾಳಜಿ ಇಲ್ಲ. ಅವರಿಗೆ ಈಗ ಈ ಸಿಡಿ ಪ್ರಕರಣಗಳನ್ನು ಹೇಗೆ ಮುಚ್ಚುವುದು ಎಂಬುದೇ ತಲೆಯಲ್ಲಿದೆ'' ಎಂದು ದೂರಿದರು.