ಭೋಪಾಲ್, ಮಾ.06 (DaijiworldNews/MB): ಮಧ್ಯಪ್ರದೇಶ ದಾಮೋಹ್ ಜಿಲ್ಲೆಯ ಬಿಜೆಪಿ ಶಾಸಕರ ಜನ್ಮದಿನ ಆಚರಣೆ ಸಂದರ್ಭ ವಿವಾದವೊಂದು ಭುಗಿಲೆದ್ದು ಇಬ್ಬರ ಹತ್ಯೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಬೆಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ವಾರ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಜಬೇರಾ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಅವರ ಜನ್ಮದಿನದಂದು ಈ ಘಟನೆ ನಡೆದಿದೆ ಎಂದು ದಮೋಹ್ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ಚೌಹಾನ್ ತಿಳಿಸಿದ್ದಾರೆ.
ಹುಟ್ಟುಹಬ್ಬ ಆಚರಣೆಗೆ ಆಗಮಿಸಿದ್ದ ಅತಿಥಿಗಳ ನಡುವೆ ವಿವಾದವೊಂದು ನಡೆದಿದ್ದು ಈ ಘರ್ಷಣೆಯಲ್ಲಿ ಜೋಗೇಂದ್ರ ಸಿಂಗ್ ಹಾಗೂ ಅರವಿಂದ್ ಜೈನ್ ಎಂಬ ಇಬ್ಬರು ವ್ಯಕ್ತಿಗಳ ಕೊಲೆ ನಡೆದಿದೆ.
"ಜೋಗೇಂದ್ರ ಸಿಂಗ್ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಮತ್ತು ಆರಂಭಿಕ ತನಿಖೆಯ ಪ್ರಕಾರ ಅರವಿಂದ್ ಜೈನ್ನನ್ನು ಕಲ್ಲು ಮತ್ತು ಕೋಲುಗಳಿಂದ ಹೊಡೆದು ಕೆಲವರು ಕೊಂದಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಅರವಿಂದ ಜೈನ್ ಶಾಸಕರ ಪ್ರತಿನಿಧಿಯಾಗಿದ್ದರೆ, ಜೋಗೇಂದ್ರ ಸಿಂಗ್ ಅತಿಥಿ ಶಿಕ್ಷಕರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದಾಗ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಅಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
ಏತನ್ಮಧ್ಯೆ, ದಾಮೋಹ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಜಯ್ ಟಂಡನ್ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಆಗಮನದಿಂದಾಗಿ ಜಿಲ್ಲೆಯು ಹೆಚ್ಚಿನ ಭದ್ರತೆಯಲ್ಲಿರುವ ಸಮಯದಲ್ಲಿ ಬಿಜೆಪಿ ಶಾಸಕ ಧರ್ಮೇಂದ್ರ ಸಿಂಗ್ ಲೋಧಿ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಟಂಡನ್ ಹೇಳಿದ್ದಾರೆ.