ಬೆಂಗಳೂರು, ಮಾ.06 (DaijiworldNews/MB): "ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಒಳಗೊಂಡ ಸಿಡಿ ವಿಷಯವನ್ನು ಹೈಕಮಾಂಡ್ ಬಹಳ ಗಂಭೀರವಾಗಿ ಪರಿಗಣಿಸಿದೆ" ಎಂದು ಹೇಳಿರುವ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು ಹೈಕೋರ್ಟ್ ಮೊರೆ ಹೋದ ಆರು ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಸೆಕ್ಸ್ ಸಿಡಿ ವಿಷಯವು ಸ್ವಲ್ಪ ಮುಜುಗರವನ್ನುಂಟುಮಾಡಿದೆ. ನಾನು ಅದನ್ನು ನಿರಾಕರಿಸುತ್ತಿಲ್ಲ'' ಎಂದು ಹೇಳಿದರು.
"ಪಕ್ಷದ ಹೈಕಮಾಂಡ್ ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಸಚಿವರು ರಾಜೀನಾಮೆಯನ್ನು ನೀಡಲು ಸೂಚಿಸಿತ್ತು'' ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ಸಚಿವಾಲಯದ ಆರು ಮಂತ್ರಿಗಳು ತಮ್ಮ ಬಗ್ಗೆ ಸುದ್ದಿಗಳನ್ನು ವರದಿ ಮಾಡುವ ಬಗ್ಗೆ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗಳನ್ನು ಕೋರಿ ಹೈಕೋರ್ಟ್ ಮೊರೆ ಹೋದ ಬಗ್ಗೆ ಪ್ರತಿಕ್ರಿಯಿಸಿದ ಅವರು, ''ಎಲ್ಲರೂ ಅವರ ಭವಿಷ್ಯದ ಬಗ್ಗೆ ಚಿಂತಿಸುತ್ತಾರೆ. ಆದರೆ ಅನಗತ್ಯವಾಗಿ ನ್ಯಾಯಾಲಯಗಳನ್ನು ಸಂಪರ್ಕಿಸುವುದು ಒಳ್ಳೆಯದಲ್ಲ'' ಎಂದು ಹೇಳಿದರು.
ಇನ್ನು ಪತ್ನಿಯೊಂದಿಗೆ ಕೊರೊನಾ ಲಸಿಕೆ ಹಾಕಿಸಿಕೊಂಡ ಅವರು, "ಜನರಿಗೆ ಲಸಿಕೆ ನೀಡಿ ದೇಶವನ್ನು ಸಾಂಕ್ರಾಮಿಕ ರೋಗದಿಂದ ಮುಕ್ತಗೊಳಿಸಬೇಕು. ನಾನು ಹಿರಿಯ ನಾಗರಿಕನಾಗಿ ಲಸಿಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ಕೊರೊನಾ ಸಾಂಕ್ರಾಮಿಕ ರೋಗವನ್ನು ತೊಡೆದುಹಾಕಲು ದೇಶವು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಮತ್ತು ಬಡವರಿಗೂ ಸಹ ಲಸಿಕೆಯನ್ನು ನೀಡುತ್ತಿದೆ'' ಎಂದು ಹೇಳಿದರು.
ಏತನ್ಮಧ್ಯೆ ರಮೇಶ್ ಜಾರಕಿಹೊಳಿಯ ರಾಸಲೀಲೆಯ ಸಿಡಿ ಪ್ರಕರಣ ಬಯಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ಆರು ಸಚಿವರು ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ.