ಬೆಂಗಳೂರು, ಮಾ 06 (DaijiworldNews/MS): ಶಾಸಕ ರಮೇಶ್ ಜಾರಕಿಹೊಳಿಯ ರಾಸಲೀಲೆಯ ಸಿಡಿ ಪ್ರಕರಣ ಬಯಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ಆರು ಸಚಿವರು ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ.
ಸಚಿವರ ವಿರುದ್ಧ ದಾಖಲೆ ರಹಿತ ಹಾಗೂ ಸುಳ್ಳು ಸುದ್ದಿ ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ಕೋರ್ಟ್ ಆದೇಶ ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ಸಿಸಿಹೆಚ್ 20 ರ ನ್ಯಾಯಾಧೀಶ ಬಿ.ಎಸ್.ವಿಜಯಕುಮಾರ್ ಅವರು ಅರ್ಜಿ ಕುರಿತು ರಾಜ್ಯದ ಎಲ್ಲ ಮಾಧ್ಯಮಗಳಿಗೂ ತುರ್ತು ನೋಟಿಸ್ ಜಾರಿಗೊಳಿಸಿದ್ದಾರೆ. ಬಳಿಕ ಮಾ.31ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
"ಸಾಹುಕಾರ್ ಸರಸದ ಸಿಡಿ" ಬಯಲಾಗುತ್ತಿದ್ದಂತೆ, ಸಚಿವ ಡಾ. ಕೆ. ಸುಧಾಕರ್, ಬಿ ಸಿ ಪಾಟೀಲ್, ಶಿವರಾಜ್ ಹೆಬ್ಬಾರ್, ಡಾ. ಕೆ ಸಿ ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದು ಸಾರ್ವಜನಿಕರ ಅಚ್ಚರಿಗೆ ಹಾಗೂ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.