ಬೆಂಗಳೂರು, ಮಾ.06 (DaijiworldNews/MB): ಆರೋಗ್ಯ ಸಚಿವ ಕೆ. ಸುಧಾಕರ್ ಸೇರಿ ಆರು ಸಚಿವರು ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವಿಚಾರವಾಗಿ ಸುಧಾಕರ್ ಕಾಲೆಳೆದಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಸಚಿವ ಸುಧಾಕರ್ ಅವರದ್ದೂ ಸಿಡಿ ಇದೆಯಾ'' ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪ್ರಸ್ತುತ ರಾಜಕಾರಣಿಗಳು ಎಂದರೆ ಲಫಂಗರು ಎಂಬಂತಾಗಿದೆ. ಕೆಲವರು ಮಾಡುವ ತಪ್ಪಿನಿಂದಾಗಿ ಜನರು ಎಲ್ಲಾ ರಾಜಕಾರಣಿಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ'' ಎಂದು ಬೇಸರ ವ್ಯಕ್ತಪಡಿಸಿದರು.
''ಇನ್ನು ಕೆಲವು ಸಚಿವರುಗಳು ತಮ್ಮ ವಿರುದ್ದ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮದೂ ಸಿಡಿ ಇದೆ ಎಂದು ಅವರು ಈಗ ಇವೆಲ್ಲಾ ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಸಚಿವ ಸುಧಾಕರ್ ಅವರದ್ದೂ ಸಿಡಿ ಇದೆಯಾ?'' ಎಂದು ಟಾಂಗ್ ನೀಡಿದರು.