ಬೆಂಗಳೂರು, ಮಾ.06 (DaijiworldNews/MB): ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಬಿಡುಗಡೆಯ ಹಿಂದೆ ಕನಕಪುರ, ಬೆಳಗಾವಿ ಕಡೆಯವರ ಷಡ್ಯಂತ್ರವಿದೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ದೂರಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ಸಿಡಿ ಪ್ರಕರಣದ ಹಿಂದೆ ಕನಕಪುರ ಮತ್ತು ಬೆಳಗಾವಿಯವರ ಕೈವಾಡವಿದೆ. ಅವರೇ ಇದಕ್ಕೆಲ್ಲ ಕಾರಣ. ಅವರು ರಮೇಶ್ ಜಾರಕಿಹೊಳಿ ಅವರ ವಿಚಾರದಲ್ಲಿ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಇದರ ಪರಿಣಾಮವನ್ನು ಅನುಭವಿಸುತ್ತಾರೆ'' ಎಂದು ಎಚ್ಚರಿಕೆಯನ್ನೂ ನೀಡಿದರು.
''ಮೈತ್ರಿ ಸರ್ಕಾರವನ್ನು ಉರುಳಿಸಿದ ಕಾರಣದಿಂದಾಗಿ ಕೆಲವರು ಈ ಷಡ್ಯಂತ್ರವನ್ನು ಮಾಡಿದ್ದಾರೆ. ಇದರ ಹಿಂದೆ ರಾಜಕೀಯ ಪಿತೂರಿಯಿದೆ'' ಎಂದು ಹೇಳಿದರು.
ಇನ್ನು ಆರು ಸಚಿವರು ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಆ ಆರು ಜನ ಸಚಿವರು ಯಾಕೆ ಕೋರ್ಟ್ಗೆ ಹೋದರು ಎಂದು ನನಗೆ ತಿಳಿದಿಲ್ಲ. ಅವರ ವೈಯಕ್ತಿಯ ರಕ್ಷಣೆಗಾಗಿ ಅವರು ಕೋರ್ಟ್ಗೆ ಹೋಗಿರಬಹದು. ಅದು ಅವರನ್ನೆ ಪ್ರಶ್ನಿಸಬೇಕಾದ ವಿಷಯ. ನೀವು ಅವರ ಬಳಿಯೇ ಕೇಳಿ. ನನ್ನನ್ನು ಈ ವಿಚಾರಕ್ಕೆ ಎಳೆಯಬೇಡಿ'' ಎಂದು ಹೇಳಿ ನುಣುಚಿಕೊಂಡರು.