ಬೆಂಗಳೂರು, ಮಾ.06 (DaijiworldNews/PY): "ಅನಗತ್ಯವಾಗಿ ನ್ಯಾಯಾಲಯಕ್ಕೆ ಹೋಗುವುದು ಒಳ್ಳೆಯದಲ್ಲ" ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ಕೋರ್ಟ್ ಮೂಲಕ ತಡೆಯಾಜ್ಞೆ ತರಲು ನಿರ್ಬಂಧ ಕೋರಿ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸ್ವಾಭಾವಿಕವಾಗಿ ಈ ರೀತಿಯಾದ ಆರೋಪಗಳು ಬಂದಲ್ಲಿ ಮಂತ್ರಿಗಳ ತನಿಖೆಗೆ ಸಹಕರಿಸಬೇಕು. ಪ್ರತಿಯೋರ್ವ ವ್ಯಕ್ತಿಗೂ ಕೂಡಾ ತನ್ನ ಭವಿಷ್ಯದ ಬಗ್ಗೆ ಯೋಚನೆ ಇದ್ದೇ ಇರುತ್ತದೆ. ಆ ಬಗ್ಗೆ ನೋಡಿಕೊಂಡು ಅವರು ಹೆಜ್ಜೆ ಇಡುತ್ತಾರೆ. ಅದು ಅವರ ವೈಯುಕ್ತಿವಾದ ವಿಚಾರ. ಆದರೆ, ಅನವಶ್ಯಕವಾಗಿ ಕೋರ್ಟ್ಗೆ ಹೋಗುವುದು ಸೂಕ್ತವಲ್ಲ" ಎಂದು ಹೇಳಿದರು.
"ಸಿ.ಡಿ ವಿಚಾರದಿಂದ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಮುಜುಗರವಾಗಿದೆ. ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ಏನೂ ಬೇಕಾದರೂ ತಿರುಚಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ತಿರುಚಿದ್ದು ಎಂದು ಹೇಳುತ್ತಿಲದಲ. ತನಿಖೆಯು ತನ್ನದೇ ಕಾರ್ಯವನ್ನು ಮಾಡಲಿದೆ" ಎಂದು ತಿಳಿಸಿದರು.
"ನೈತಿಕತೆಗೆ ಪ್ರಾಶಸ್ತ್ಯ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದೆಲ್ಲನ್ನೂ ಕೂಡಾ ಪಕ್ಷ ಗಮನಿಸದ ಕಾರಣ ರಾಜೀನಾಮೆ ಕೊಡಿಸಿದ್ದು. ರಾಜ್ಯ ಬಿಜೆಪಿ ಉಸ್ತುವಾರಿಗೆ ಈ ವಿಚಾರದ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದೇವೆ" ಎಂದರು.