ಬೆಂಗಳೂರು, ಮಾ 06 (DaijiworldNews/MS): ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದೇವೆ ಎಂಬ ಆರೋಪ ನಮ್ಮ ಮೇಲೆ ಇದ್ದು , ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಹಾಯ ಮಾಡಿದ್ದ 15 ಶಾಸಕರ ತೇಜೋವಧೆ ಮಾಡಿ ರಾಜೀನಾಮೆ ನೀಡಿಸಲು ಷಡ್ಯಂತ್ರ ರಚಿಸಲಾಗುತ್ತಿದೆ. ಹೀಗಾಗಿ ಇಂದು ಅಥವಾ ಸೋಮವಾರ ಮತ್ತೆ ಆರು ಜನ ಸಚಿವರು ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ ಎಂದು ರಾಜ್ಯ ಸಹಕಾರಿ ಸಚಿವ ಎಸ್ .ಟಿ.ಸೋಮಶೇಖರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕೆಂದು ಗೃಹಮಂತ್ರಿಗೆ ಮಾತನಾಡಿದ್ದೇನೆ. ಕೆ.ಗೋಪಾಲಯ್ಯ, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಅವರು ಕೂಡಾ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ ನಿರ್ದೇಶಿಸಲು ಕೋರಿ ಇಂದು ಅಥವಾ ಸೋಮವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ಸತ್ಯ ಏನೆಂದು ಹೊರಬರುವ ಮುಂಚೆಯೇ ಮಾಧ್ಯಮಗಳಲ್ಲಿ ಪ್ರಸಾರವಾಗಿ ತೇಜೋವಧೆಯಾಗುತ್ತದೆ.
ಇಷ್ಟು ವರ್ಷ ರಾಜಕಾರಣದ ಮಾಡಿಕೊಂಡು ಬಂದಿದ್ದೇವೆ. ಆದರೆ ಕ್ಷಣ ಮಾತ್ರದಲ್ಲಿ ಟಿವಿಯಲ್ಲಿ ಏನೋ ಸುದ್ದಿ ಬಿತ್ತರಗೊಂಡರೆ ಹೇಗೆ?. ಹೀಗಾಗಿ ಮತ್ತೆ ಆರು ಜನ ಸಚಿವರು ಕೋರ್ಟ್ ಮೆಟ್ಟಿಲೇರಲಿದ್ದಾರೆ. ಬಾಕಿ ಉಳಿದವರು ಶೀಘ್ರದಲ್ಲಿ ಉಳಿದವರು ಕೂಡಾ ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆ ಎಂದು ಹೇಳಿದ್ದಾರೆ.