ನವದೆಹಲಿ, ಮಾ.06 (DaijiworldNews/PY): ಕೇಂದ್ರ ಸರ್ಕಾರಕ್ಕೆ ಚುನಾವಣೆ ಆಯೋಗ ಸೂಚನೆ ನೀಡಿದ್ದು, "ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೆಶಗಳಲ್ಲಿ ವಿಧಾನಸಭಾ ಚುನಾವಣೆ ಪ್ರಾರಂಭವಾಗುವ ಒಂದು ವಾರಕ್ಕೂ ಮುನ್ನ ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ತೆಗೆಯಬೇಕು" ಎಂದು ತಿಳಿಸಿದೆ.
"ಈಗಾಗಲೇ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಲ್ಲಿ ನೀತಿಸಂಹಿತೆ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಲಿದ್ದು, ಕೂಡಲೇ ಪ್ರಧಾನಿ ಮೋದಿ ಅವರ ಫೋಟೋವನ್ನು ತೆಗೆಯಬೇಕು ಎಂದು ಚುನಾವಣಾ ಆಯೋಗ ಕೇಂದ್ರಕ್ಕೆ ಸೂಚಿಸಿದೆ" ಎಂದು ಮೂಲಗಳು ಹೇಳಿವೆ.
"ಅಧಿಕೃತ ಯಂತ್ರ ಕಾರ್ಯಗಳನ್ನು ಪ್ರಧಾನಿ ಮೋದಿ ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ" ಎಂದು ಪಶ್ಚಿಮಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗಕ್ಕೆ ಈ ವಾರದ ಪ್ರಾರಂಭದಲ್ಲಿ ನೀಡಿದ್ದ ದೂರಲ್ಲಿ ಆರೋಪಿಸಿದ್ದರು.
ಪಶ್ಚಿಮ ಬಂಗಾಳದ ಚುನಾವಣಾ ಅಧಿಕಾರಿಗಳು ಕೊರೊನಾ ಲಸಿಕಾ ಪ್ರಮಾಣ ಪತ್ರದಲ್ಲಿನ ಪ್ರಧಾನಿ ಮೋದಿ ಅವರ ಫೋಟೋ ವಿಚಾರದ ಬಗ್ಗೆ ಮೊದಲೇ ಧ್ವನಿ ಎತ್ತಿದ್ದು, ಫೋಟೋವನ್ನು ತೆಗೆಯುವಂತೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಕೋರಿದ್ದರು. ಪ್ರಧಾನಿ ಮೋದಿ ಅವರ ಫೋಟೋ ಕಾಣದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸರ್ಕಾರ ಪ್ರತಿಕ್ರಿಯೆ ನೀಡಿತ್ತು.
ಪ್ರಧಾನಿ ಮೋದಿ ಅವರ ಫೋಟೋ ಪಶ್ಚಿಮಬಂಗಾಳವನ್ನು ಹೊರತುಪಡಿಸಿದರೆ, ಇತರೆ ರಾಜ್ಯಗಳಲ್ಲಿ ಬಳಕೆಯಲ್ಲಿವೆ. ಸೋಮವಾರ ಎರಡನೇ ಹಂತದ ಕೊರೊನಾ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು, ಹಾಗಾಗಿ ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘಿಸಿದಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
ಇನ್ನು ಈ ಬಗ್ಗೆ ಆರೋಪಿಸಿದ ಟಿಎಂಸಿ, "ಆರೋಗ್ಯ ಕಾರ್ಯಕರ್ತರ, ವೈದ್ಯರ ಹಾಗೂ ನರ್ಸ್ಗಳ ಶ್ರಮವನ್ನು ಕಸಿದುಕೊಳ್ಳಲಾಗುತ್ತಿದೆ" ಎಂದಿದೆ.
ಈ ಹಿನ್ನೆಲೆ, "ತಕ್ಷಣವೇ ಫೋಟೋವನ್ನು ತೆಗೆಯಬೇಕು" ಎಂದು ಸರ್ಕಾರಕ್ಕೆ ಆಯೋಗ ಸೂಚನೆ ನೀಡಿದೆ.
ಇನ್ನು ಕೆಲವೇ ವಾರಗಳಲ್ಲಿ ಕೇರಳ, ಪಶ್ಚಿಮಬಂಗಾಳ ಸೇರಿದಂತೆ ಅಸ್ಸಾಂ, ಪುದುಚೇರಿ, ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯು ಪ್ರಾರಂಭವಾಗಲಿದೆ. ಮಾ.27ರಿಂದ ಎಪ್ರಿಲ್ 1, ಎಪ್ರಿಲ್ 6, ಎಪ್ರಿಲ್ 10, ಎಪ್ರಿಲ್ 17, ಎಪ್ರಿಲ್ 22 ಹಾಗೂ ಎಪ್ರಿಲ್ 29ರವರೆಗೆ ಪಶ್ಚಿಮಬಂಗಾಳದಲ್ಲಿ ಎಂಟು ಹಂತದ ಮತದಾನ ನಡೆಯಲಿದೆ. ಕೇರಳ, ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಎ.6ರಂದು ಒಂದೇ ಸುತ್ತಿನಲ್ಲಿ ಮತದಾನ ನಡೆಯಲಿದ್ದು, ಅಸ್ಸಾಂನಲ್ಲಿ ಮಾ.27, ಎಪ್ರಿಲ್ 1 ಹಾಗೂ ಎಪ್ರಿಲ್ 6ರಂದು ಮತದಾನ ನಡೆಯಲಿದೆ.