ಭದ್ರಾವತಿ, ಮಾ 06 (DaijiworldNews/MS): ಸದನದಲ್ಲಿ ಅಂಗಿ ಬಿಚ್ಚಿ, ಸ್ಪೀಕರ್ ಅಸಮಾಧಾನಕ್ಕೆ ಕಾರಣವಾಗಿ ಒಂದು ವಾರಗಳ ಕಾಲ ಅಮಾನತು ಆಗಿದ್ದ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿಯಲ್ಲಿ ಫೆ.28 ರ ರಾತ್ರಿ ನಡೆದ ಘಟನೆ ಸಂಬಂಧ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಸವೇಶ್ ಅವರನ್ನು ಬಂಧಿಸಲಾಗಿದೆ. ಕಬಡ್ಡಿ ಪಂದ್ಯಾವಳಿಯಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ:
ಫೆ.28 ರ ರಾತ್ರಿ ಭದ್ರಾವತಿಯಲ್ಲಿ ನಡೆದ ಪ್ರೊ ಕಬ್ಬಡ್ಡಿ ಪಂದ್ಯಾವಳಿ ಸಂದರ್ಭ ರನ್ನರ್ ಅಪ್ ಆಗಿದ್ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್ ತಂಡ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ್ದರು, ಇದರಿಂದ ಸಿಟ್ಟಾದ ಶಾಸಕ ಸಂಗಮೇಶ್ ಪುತ್ರ, ಸಹೋದರನ ಪುತ್ರರಿಂದ ತಂಡದ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಇನ್ನೂ ಘಟನೆ ಸಂಬಂಧ ಭದ್ರಾವತಿ ಹಳೆನಗರ ಠಾಣೆಯಲ್ಲಿ ಕೊಲೆ ಬೆದರಿಕೆ, ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು, ಸಂಗಮೇಶ್ ಪುತ್ರ ಅಜ್ಞಾತ ಸ್ಥಳದಲ್ಲಿ ಇರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ನಿನ್ನೆ ತಡರಾತ್ರಿ ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ 15 ಮಂದಿಯನ್ನು ಬಂಧಿಸಲಾಗಿದೆ.