ಹುಣಸೂರು, ಮಾ.06 (DaijiworldNews/PY): ಸ್ವಿಫ್ಟ್ ಕಾರಿಗೆ ತೂಫಾನ್ ಡಿಕ್ಕಿಯಾದ ಪರಿಣಾಮ ಹಸೆಮಣೆ ಏರಬೇಕಿದ್ದ ವರ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ತೀವ್ರ ಗಾಯಗೊಂಡ ಘಟನೆ ಹುಣಸೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಹುಣಸೂರಿನ ಹಿರಿಕ್ಯಾತನಹಳ್ಳಿ ನಿವಾಸಿ ಜಗದೀಶ್ ಎಂಬವರ ಪುತ್ರ ಅಭಿಷೇಕ್ ಗೌಡ (26) ಎಂದು ಗುರುತಿಸಲಾಗಿದೆ. ಇವರ ತಾಯಿ ಮಂಜುಳ ಹಾಗೂ ನಟರಾಜ್ ಎನ್ನುವವರು ತೀವ್ರ ಗಾಯಗೊಂಡಿದ್ದು, ಇವರನ್ನು ಚನ್ನರಾಯಪಟ್ಟಣ ಹಾಗೂ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ರ ಅಭಿಷೇಕ್ನ ವಿವಾಹ ಸಂಬಂಧ ಜಗದೀಶ್ ಅವರು ದಾವಣಗೆರೆಯಿಂದ ಬಟ್ಟೆ ಖರೀದಿ ಮಾಡಿ ಟಿ.ಟಿ ವಾಹನದಲ್ಲಿ ಹುಣಸೂರಿನತ್ತ ಬರುತ್ತಿದ್ದರು. ಮದುಮಗ ಅಭಿಷೇಕ್, ಅವರ ತಾಯಿ ಮಂಜುಳ, ಸ್ನೇಹಿತ ನಟರಾಜ್ ಹಾಗೂ ಯುವತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ಮಂಜು ಬೀಳುತ್ತಿರುವ ಕಾರಣ ಚನ್ನರಾಯಪಟ್ಟಣದ ಬಳಿ ಎದುರಿನಿಂದ ಬರುತ್ತಿದ್ದ ತೂಫಾನ್ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಅಭಿಷೇಕ್ ಗೌಡ ಮೃತಪಟ್ಟಿದ್ದಾರೆ. ನಟರಾಜ್ಗೆ ತೀವ್ರ ಗಾಯವಾಗಿದ್ದು, ಅಭಿಷೇಕ್ ತಾಯಿ ಮಂಜುಳ ಅವರ ಕೈ ಕಾಲುಗಳಿಗೆ ತೀವ್ರವಾದ ಗಾಯಗಳಾಗಿದೆ. ಯುವತಿಗೂ ಕೂಡಾ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಟಿಟಿ ವಾಹನದಲ್ಲಿದ್ದ ಕಾರಣ ಜಗದೀಶ್ ಅವರು ಅಪಾಯದಿಂದ ಪಾರಾಗಿದ್ದಾರೆ.
ಜಗದೀಶ್ ಅವರ ಮೊದಲ ಪುತ್ರ ಐದು ವರ್ಷಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದರು. ಇದೀಗ ಹಸೆಮಣೆ ಏರಬೇಕಿದ್ದ ಎರಡನ ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದು, ಕುಟುಂಬಕ್ಕೆ ಆಘಾತವುಂಟಾಗಿದೆ.
ಮೃತದೇಹವನ್ನು ಚನ್ನರಾಯಪಟ್ಟಣ ಶವಾಗಾರದಲ್ಲಿರಿಸಲಾಗಿದೆ. ಘಟನೆಯ ಬಗ್ಗೆ ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.