ನವದೆಹಲಿ,ಮಾ.06 (DaijiworldNews/HR): ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸಬೇಕೆಂದು ಗ್ರಾಹಕರ ಒತ್ತಾಯದಲ್ಲಿ ಅರ್ಥವಿದೆ, ಹಾಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ನಿರ್ಧರಿಸಬೇಕು ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ.
ಈ ಕುರಿತು ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ತೈಲ ಬೆಲೆಗಳು ಕಡಿಮೆಯಾಗಬೇಕು ಎಂದು ಹೇಳಲು ಗ್ರಾಹಕರಿಗೆ ಸಾಕಷ್ಟು ಕಾರಣಗಳಿವೆ, ನಿಜಕ್ಕೂ ತೈಲ ಬೆಲೆ ಏರಿಕೆ ಗ್ರಾಹಕರಿಗೆ ಒಂದು ಹೊರೆಯಾಗಿದೆ" ಎಂದರು.
"ತೈಲದ ಮೇಲಿನ ತೆರಿಗೆ ಇಳಿಸುವುದ ಧರ್ಮಸಂಕಟದ ವಿಷಯವಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳ ಕೇಂದ್ರದ ತೆರಿಗೆ ಮಾತ್ರವಲ್ಲ, ರಾಜ್ಯಗಳೂ ಸುಂಕ ವಿಧಿಸುತ್ತವೆ. ಹಾಗಾಗಿ, ಇದು ಕೇವಲ ಕೇಂದ್ರ ಸರ್ಕಾರದ ವಿಷಯವಲ್ಲ. ಹೀಗಾಗಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಈ ಬಗ್ಗೆ ಮಾತನಾಡಬೇಕು" ಎಂದಿದ್ದಾರೆ.
ಇನ್ನು "ಜಿಎಸ್ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತರುವ ಮೂಲಕ ತೆರಿಗೆಗಳ ಈ ಪರಿಣಾಮವನ್ನು ಕೊನೆಗೊಳಿಸಲು ಸಾಧ್ಯವಿದ್ದು, ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ಏಕರೂಪತೆಯನ್ನು ತರುತ್ತದೆ. ಹಾಗಾಗಿ ಜಿಎಸ್ಟಿ ಕೌನ್ಸಿಲ್ ಈ ಬಗ್ಗೆ ಚಿಂತಿಸಬೇಕಿದೆ" ಎಂದು ಹೇಳಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ ಹಲವೆಡೆ ಪೆಟ್ರೋಲ್ ದರ 100 ದಾಟಿದ್ದು, ರಾಜಕೀಯ ವಲಯ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.