ಬೆಂಗಳೂರು, ಮಾ 06 (DaijiworldNews/MS): ಬಿಜೆಪಿ ಸರ್ಕಾರದ ಸಚಿವರು ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆಶಾಸಕ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಹೊರ ಬರುತ್ತಿದ್ದಂತೆ ಅಲರ್ಟ್ ಆಗಿರುವ ಆರು ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ "ಕುಂಬಳಕಾಯಿ ಕಳ್ಳ ಅಂದರೆ ಕರ್ನಾಟಕದ ಬಿಜೆಪಿ ಸಚಿವರೇಕೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ? ಎಂದು ವ್ಯಂಗ್ಯವಾಡಿದೆ.
ಸಿ.ಡಿ ಶಬ್ದ ಕೇಳಿದರೆ ಸರ್ಕಾರದ ಇಡೀ ಸಂಪುಟವೇ ಏಕೆ ಬೆಚ್ಚಿ ಬೀಳುತ್ತಿದೆ?."ಆಪರೇಷನ್ ಕಮಲ" ಎನ್ನುವುದು ಬಿಜೆಪಿಯ ರಾಜಕೀಯ ವ್ಯಾಭಿಚಾರ.
ಈ ಸರ್ಕಾರ ಮೇಲ್ನೋಟಕ್ಕೆ ಕಾಣುವಷ್ಟು ಸುಲಭದಲ್ಲಿ ರಚನೆಯಾಗಿದ್ದಲ್ಲ ಭೂಗತಲೋಕ, ಬೆದರಿಕೆ, ಹನಿಟ್ರಾಪ್, ಬ್ಲಾಕ್ಮೇಲ್, ಸಾವಿರಾರು ಕೋಟಿ ಹಣ, ಹೆಣ್ಣು, ಹೆಂಡ ಎಲ್ಲವನ್ನೂ ಬಿಜೆಪಿ ಉಪಯೋಗಿಸಿದ್ದು ದೃಢವಾಗುತ್ತಿದೆ.
ಅಧಿಕಾರಕ್ಕಾಗಿ ಬಿಜೆಪಿ ಯಾವ ನೀಚ ಮಟ್ಟಕ್ಕೂ ಇಳಿಯಬಲ್ಲದು. ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬೆನ್ನಲ್ಲೇ, "6 ಸಚಿವರು ಏಕೆ ಸುದ್ದಿ ಪ್ರಸಾರಕ್ಕೆ ಮುಂಜಾಗ್ರತೆಯಲ್ಲಿ ತಡೆ ತರುತ್ತಿದ್ದಾರೆ?. ಸರ್ಕಾರದ ರಚನೆಯಿಂದ ಹಿಡಿದು ಸಂಪುಟ ವಿಸ್ತರಣೆಯವರೆಗೂ ಬೃಹತ್ ಹಗರಣ ಅಡಗಿದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಸಚಿವ ಡಾ. ಕೆ. ಸುಧಾಕರ್, ಬಿ ಸಿ ಪಾಟೀಲ್, ಶಿವರಾಜ್ ಹೆಬ್ಬಾರ್, ಡಾ. ಕೆ ಸಿ ನಾರಾಯಣಗೌಡ, ಎಸ್ ಟಿ ಸೋಮಶೇಖರ್, ಭೈರತಿ ಬಸವರಾಜ್ ಅವರು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕಾರಕ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಚಿವರು ಸಲ್ಲಿಸಿದ ಅರ್ಜಿ ಶನಿವಾರ ವಿಚಾರಣೆಗೆ ಬರಲಿದೆ.