ಬೆಂಗಳೂರು, ಮಾ. 05 (DaijiworldNews/SM): ರಾಜ್ಯದಲ್ಲಿ ಕೋವಿಡ್ ವಕ್ಕರಿಸಿರುವ ಬಳಿಕ ಸರಕಾರದ ಕೆಲವು ಸಂಸ್ಥೆಗಳು ಹಣಕಾಸಿನ ಮುಗ್ಗಟ್ಟನ್ನು ಅನುಭವಿಸಿವೆ. ಇದೀಗ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಸಾರಿಗೆ ಸಂಸ್ಥೆ 4 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನಪರಿಷತ್ ನಲ್ಲಿ ಹೇಳಿದ್ದಾರೆ.
ಜೆಡಿಎಸ್ ನ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ 4 ಸಾರಿಗೆ ನಿಗಮಗಳಿಗೆ 4 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಮುಂಗಡ ಪತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೂಡ ಹಣಕಾಸಿನ ಇತಿಮಿತಿಯಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ಅನುದಾನ ಬಂದ ನಂತರ, ನಷ್ಟ ಸರಿದೂಗಿಸಲು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಶಾಸಕರು ಹೊಸ ಬಸ್ ಗಳ ಖರೀದಿ, ಬಸ್ ನಿಲ್ದಾಣಗಳ ಆರಂಭ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆದರೆ, ಈ ಸಲ ಕೊರೋನಾದಿಂದ ಸಾಧ್ಯವಾಗಿಲ್ಲ. ಬಜೆಟ್ ಮಂಡನೆಯಾದ ನಂತರ ಇದಕ್ಕೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದ್ದಾರೆ.