ಜೈಪುರ, ಮಾ.05 (DaijiworldNews/HR): ರಾಜಸ್ಥಾನದ ಹನುಮಾನ್ಘರ್ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಸಂತ್ರಸ್ತ ಯುವತಿ ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಆಕೆಯನ್ನು ಬಿಕಾನೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಯುವತಿ ಮೇಲೆ 2018ರಲ್ಲಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಆರೋಪಿಯೇ ಆಕೆಯನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲು ಯತ್ನಿಸಿದ್ದು, ಈ ಸಂಬಂಧ ಆರೋಪಿ ಪ್ರದೀಪ್ ವಿಷ್ಣೋಯ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಗೋಲಾಪುರ ಪೊಲೀಸ್ ಠಾಣಾಧಿಕಾರಿ ಓಂಪ್ರಕಾಶ್ ತಿಳಿಸಿದ್ದಾರೆ.
"ಗುರುವಾರ ಮುಂಜಾನೆಯೇ ಮನೆಯೊಳಗೆ ಪ್ರವೇಶಿಸಿದ್ದ ಆರೋಪಿ, ಮನೆಯ ನೆಲದ ಮೇಲೆ ಸೀಮೆಎಣ್ಣೆಯನ್ನು ಚೆಲ್ಲಿ ಬಳಿಕ ಹೊರಗಿನಿಂದ ಬಾಗಿಲು ಮುಚ್ಚಿದ ಆರೋಪಿ ಬಾಗಿಲು ಬಡಿದು ಸಂತ್ರಸ್ತೆಯ ಹೆಸರನ್ನು ಕೂಗಿ ಕರೆದಿದ್ದಾನೆ. ಸಂತ್ರಸ್ತೆ ಬಾಗಿಲು ತೆರೆಯುತ್ತಿದ್ದಂತೆಯೇ ಆರೋಪಿ ಉರಿಯುತ್ತಿರುವ ಕಟ್ಟಿಗೆಯನ್ನು ನೆಲದ ಮೇಲೆ ಬಿಸಾಡಿದ್ದಾನೆ. ಸ್ಥಳದಲ್ಲಿದ್ದ ಸಂತ್ರಸ್ತೆಗೆ ಬೆಂಕಿ ತಗುಲಿ ತೀವ್ರವಾಗಿ ಗಾಯಗೊಂಡಿದ್ದಾಳೆ" ಎಂದು ಪೊಲೀಸರು ವಿವರಿಸಿದ್ದಾರೆ.
ಈ ಸಂಬಂಧ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.