ಬೆಂಗಳೂರು, ಮಾ.05 (DaijiworldNews/PY): "ಈ ಬಾರಿಯ ಬಜೆಟ್ ಅಧಿವೇಶನ ಜನರ ಸಂಕಷ್ಟದ ಮೇಲೆ ಬೆಳಕು ಚೆಲ್ಲಲಿ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಒಂದು ರಾಷ್ಟ್ರ-ಒಂದು ಚುನಾವಣೆ ವಿಧಾನಸಭೆಯಲ್ಲಿ ಚರ್ಚಿಸುವಷ್ಟು ಪ್ರಸ್ತುತವಲ್ಲ. ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಅಗತ್ಯವಿದ್ದು, ಆ ತಿದ್ದುಪಡಿಯ ಪರಮಾಧಿಕಾರವಿರುವುದು ಸಂಸತ್ತಿಗೆ ಮಾತ್ರ. ಈ ವಿಚಾರ ಚರ್ಚಿಸುವ ಅಗತ್ಯವೇನು? ಇದು ಆರ್ಎಸ್ಎಸ್ನ ರಹಸ್ಯ ಕಾರ್ಯಸೂಚಿಯಾಗಿದೆ. ಸದನವು ಆರ್ಎಸ್ಎಸ್ನ ಅಜ್ಞಾನುವರ್ತಿಯಲ್ಲ" ಎಂದು ಕಿಡಿಕಾರಿದ್ದಾರೆ.
"ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವುದು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ. ಅದರ ಬದಲು ಒಂದು ರಾಷ್ಟ್ರ-ಒಂದು ಚುನಾವಣೆಯ ಬಗ್ಗೆಯಲ್ಲ. ಈಗಾಗಲೇ ಕೇಂದ್ರ-ರಾಜ್ಯ ಸರ್ಕಾರದ ದುರಾಡಳಿತದಿಂದ ಜನ ನೋವು ತಿನ್ನುತ್ತಿದ್ದಾರೆ. ಬೆಲೆಯೇರಿಕೆ ಭೂತಕ್ಕೆ ಜನ ನಡುಗಿದ್ದಾರೆ. ಈ ಅಧಿವೇಶನ ಜನರ ಸಂಕಷ್ಟದ ಬಗ್ಗೆ ಬೆಳಕು ಚೆಲ್ಲಲಿ" ಎಂದಿದ್ದಾರೆ.