ಕೆಜಿಎಫ್ (ಕೋಲಾರ), ಮಾ.05 (DaijiworldNews/MB): ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯೊಬ್ಬನನ್ನು ಹಿಡಿಯಲು ಬಂದಿದ್ದ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರಿನಾಥ್ ಬಾಬು ಮೇಲೆ ಆರೊಪಿಯು ಲಾಂಗ್ನಿಂದ ದಾಳಿ ನಡೆಸಿದ್ದು ಸಬ್ಇನ್ಸ್ಪೆಕ್ಟರ್ ಅವರ ಬಲಗೈ ತುಂಡಾದ ಘಟನೆ ಕೋಲಾರದ ಕೆಜಿಎಫ್ನ ಅಂಡ್ರಸನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಲೂರ್ದು ನಗರದಲ್ಲಿ ನಡೆದಿದೆ.
''ಆರೋಪಿ ಅಪ್ಪೆನ್ (28)ನ ಲೂರ್ದು ನಗರದಲ್ಲಿ ಇರುವ ಬಗ್ಗೆ ಲಭಿಸಿದ ಮಾಹಿತಿಯ ಆಧಾರದಲ್ಲಿ ಮಹದೇವಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆರೋಪಿಯ ಬಂಧನಕ್ಕೆ ಆ ಪ್ರದೇಶಕ್ಕೆ ಬಂದಿದ್ದರು. ಆದರೆ ಈ ಬಗ್ಗೆ ಕೆಜಿಎಫ್ನ ಸ್ಥಳೀಯ ಪೊಲೀಸರ ಸಹಕಾರ ಪಡೆಯದೆಯೇ ಆರೋಪಿಯ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭ ಆರೋಪಿಯು ಲಾಂಗ್ನಿಂದ ದಾಳಿ ನಡೆಸಿದ್ದು ಸಬ್ ಇನ್ಸ್ಪೆಕ್ಟರ್ ಕೈಗಳನ್ನು ಅಡ್ಡ ಮಾಡಿದ್ದರಿಂದ ಎರಡೂ ಕೈಗಳಿಗೆ ಏಟು ಬಿದ್ದಿದೆ. ಬಲಗೈ ತುಂಡಾಗಿದ್ದು ಅವರನ್ನು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಹಾಸ್ಮಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏತನ್ಮಧ್ಯೆ ಆರೋಪಿ ಅಪ್ಪೆನ್ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ'' ಎಂದು ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್ ತಿಳಿಸಿದ್ದಾರೆ.
ಇನ್ನು ಈ ದಾಳಿ ನಡೆದು ಸುಮಾರು ಮೂರು ಗಂಟೆ ಕಳೆದರೂ ಕೂಡಾ ಅಲ್ಲಿನ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ ಎಂದು ಹೇಳಲಾಗಿದೆ. ಆರೋಪಿಯು ಬೆಳಿಗ್ಗೆ ಸುಮಾರು ಆರು ಗಂಟೆಯವರೆಗೂ ಮನೆಯಲ್ಲೇ ಮಲಗಿದ್ದು ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಗ್ಗೆ 8 ಗಂಟೆಯ ಬಳಿಕ ಕೋಲಾರ ಜಿಲ್ಲೆಯ ಎಸ್ಪಿ, ಡಿವೈಎಸ್ಪಿ, ಮೂವರು ಇನ್ಸ್ಪೆಕ್ಟರು, ನಾಲ್ವರು ಸಬ್ಇನ್ಸ್ಪೆಕ್ಟರ್ಗಳು ಹಾಗೂ ಪೊಲೀಸ್ ಸಿಬ್ಬಂದಿ ಇಡೀ ಲೂರ್ದು ನಗರವನ್ನು ಜಾಲಾಡಿದರೂ ಆರೋಪಿ ಅಪ್ಪೆನ್ ಪತ್ತೆಯಾಗಲಿಲ್ಲ ಎಂದು ವರದಿಯಾಗಿದೆ.
ಲೂರ್ದು ನಗರದಲ್ಲಿ ಕಳ್ಳರ ಗ್ಯಾಂಗ್ ಇದ್ದು, ಅದಕ್ಕೆ ಓರ್ವ ನಾಯಕನೂ ಇದ್ದಾನೆ ಎನ್ನಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ಮೂರು ರಾಜ್ಯಗಳಲ್ಲಿ ಆ ನಾಯಕ ಸುತ್ತಾಡಿ ಕಳ್ಳತನಕ್ಕೆ ಸಂಚು ಹೂಡಿ ಗ್ಯಾಂಗ್ಗೆ ಸೂಚನೆ ನೀಡುತ್ತಾನೆ ಎಂದು ವರದಿಯಾಗಿದೆ. ಇನ್ನು ಈ ನಾಯಕ ತನ್ನ ಗ್ಯಾಂಗ್ನ ಕಳ್ಳರನ್ನು ಪೊಲೀಸರು ಹಿಡಿದರೆ ಅವರಿಗೆ ಜಾಮೀನು ನೀಡಿ ರಕ್ಷಣೆಯೂ ಮಾಡುತ್ತಾನೆ ಎಂದೂ ಹೇಳಲಾಗಿದೆ. ಇವೆಲ್ಲವೂ ದಶಕಗಳಿಂದ ನಡೆಯುತ್ತಿದೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಇನ್ನು ಸಬ್ಇನ್ಸ್ಪೆಕ್ಟರ್ ಮೇಲೆ ದಾಳಿ ಮಾಡಿದ ಅಪ್ಪೆನ್ ಮನೆಯ ಬೀಗ ಒಡೆದ ಪೊಲೀಸರು ತಹಸೀಲ್ದಾರ್ ಎದುರು ಮನೆಯ ಮಹಜರು ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಪ್ಪೆನ್ನ ಬಂಧನಕ್ಕಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಈ ಬಗ್ಗೆ ಅಂಡ್ರಸನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ