ನವದೆಹಲಿ, ಮಾ.05 (DaijiworldNews/PY): ದೆಹಲಿಯಿಂದ ಪುಣೆಗೆ ಹೊರಡುತ್ತಿದ್ದ ಇಂಡಿಗೋ ವಿಮಾನವೊಂದರಲ್ಲಿ ಇದ್ದ ಪ್ರಯಾಣಿಕರೋರ್ವರು ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿಕೊಂಡಿದ್ದು, ಭಾರೀ ಗದ್ದಲ ಉಂಟಾದ ಘಟನೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
"ಮಾ.4ರಂದು ದೆಹಲಿಯಿಂದ ಪುಣೆಗೆ ಹೊರಟ್ಟಿದ್ದ ವಿಮಾನದಲ್ಲಿದ್ದ ಪ್ರಯಾಣಿಕ ತನ್ನ ಬಗ್ಗೆ ವಿಮಾನ ಸಿಬ್ಬಂದಿಗೆ ವಿವರ ನೀಡುವ ವೇಳೆ ತಾನು ಪುಣೆಗೆ ಪ್ರಯಾಣಿಸುತ್ತಿದ್ದೇನೆ. ನನಗೆ ಈ ಹಿಂದೆ ಕೊರೊನಾ ಸೋಂಕು ತಗುಲಿದೆ ಎಂದು ಹೇಳಿಕೊಂಡಿದ್ದಾರೆ" ಎಂದು ಇಂಡಿಗೋ ಅಧಿಕಾರಿಯೋರ್ವರು ಶುಕ್ರವಾರ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಪ್ರಯಾಣಿಕ ಮಾತು ಕೇಳಿ ವಿಮಾನದಲ್ಲಿದ್ದ ಉಳಿದ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಈ ಹಿನ್ನೆಲೆ ಪೈಲಟ್ ವಿಮಾನವನ್ನು ಟ್ಯಾಕ್ಸಿ ಬೇ ಗೆ ಮರಳಿ ತಂದಿದ್ದು, ಎಲ್ಲಾ ಪ್ರಯಾಣಿಕರನ್ನು ಇಳಿಸಲಾಯಿತು.
"ಬಳಿಕ ಇಡೀ ವಿಮಾನವನ್ನು ಸ್ಯಾನಿಟೈಸ್ ಮಾಡಿ, ಸೀಟ್ ಕವರ್ಗಳನ್ನು ಕೂಡಾ ಬದಲಾಯಿಸಲಾಯಿತು. ಕೊರೊನಾ ಪಾಸಿಟಿವ್ ಇತ್ತು ಎಂದಿದ್ದ ವ್ಯಕ್ತಿಯನ್ನು ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಿದ್ದು, ಸುಮಾರು ಎರಡು ಗಂಟೆ ತಡವಾಗಿ ವಿಮಾನ ಟೇಕ್ ಆಫ್ ಆಯಿತು" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.