ಬೆಂಗಳೂರು, ಮಾ.05 (DaijiworldNews/MB): ''ಪೊಲೀಸ್ ಸಿಬ್ಬಂದಿಗಳು ಒಮ್ಮಿಂದೊಮ್ಮೆ ರಸ್ತೆ ಮಧ್ಯೆ ವಾಹನಕ್ಕೆ ಅಡ್ಡ ಬಂದು ನಿಲ್ಲಿಸಿ ದಾಖಲೆ ತೋರಿಸಿ ಎಂದು ಕೇಳುವಂತಿಲ್ಲ'' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ಸಂದರ್ಭ ಜೆಡಿಎಸ್ ಸದಸ್ಯ ಎಚ್.ಎಂ.ರಮೇಶ್ಗೌಡ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ''ನಿಯಮ ಉಲ್ಲಂಘನೆ ಮಾಡಿದ ಸಂದರ್ಭ ಪೊಲೀಸರು ರಸ್ತೆಗೆ ಅಡ್ಡಬಂದು ನಿಲ್ಲಿಸಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಯಾವುದೇ ಅಪಘಾತವಾಗದಂತೆ ಹಾಗೂ ಜನರಿಗೆ ಯಾವುದೇ ತೊಂದರೆ ಆದರೆ ನೋಡಿಕೊಳ್ಳಬೇಕು. ನಿಯಮವನ್ನು ಪಾಲಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ'' ಎಂದು ಹೇಳಿದರು.
''ಸಿಸಿಟಿವಿ ಕ್ಯಾಮೆರಾ ಇಲ್ಲದ ಕಡೆಗಳಲ್ಲಿ ಸಿಗ್ನಲ್ ಜಂಪ್ ಅಥವಾ ಅತಿ ವೇಗದ ವಾಹನಗಳನ್ನು ಪತ್ತೆ ಹಚ್ಚಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ'' ಎಂದು ಕೂಡಾ ಅವರು ತಿಳಿಸಿದರು.
''ನಗರದಲ್ಲಿ ಪೂರ್ವ, ಪಶ್ಚಿಮ ಮತ್ತು ಉತ್ತರ ವಲಯ ಇವೆ. ಹೊಸದಾಗಿ, ನಾಲ್ಕನೇ ವಲಯ ಅಥವಾ ದಕ್ಷಿಣ ವಲಯ ರಚಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ'' ಎಂದು ಸ್ಪಷ್ಟನೆ ನೀಡಿದರು.