ಪಟನಾ, ಮಾ.05 (DaijiworldNews/MB): ವಧು, ವರನ ಬೇರೆ ಪ್ರೇಮದ ವಿಚಾರದಲ್ಲಿ, ವರದಕ್ಷಿಣೆ ವಿಚಾರದಲ್ಲಿ, ಹಾಗೆಯೇ ಇತ್ತೀಚೆಗೆ ಕೊರೊನಾ ಕಾರಣದಿಂದಾಗಿ ಅದೆಷ್ಟೋ ವಿವಾಹಗಳು ಮುಂದೂಡಿಕೆ ಅಥವಾ ಮುರಿದು ಬಿದ್ದಿರುವುದರ ಬಗ್ಗೆ ನಾವು ಸಾಮಾನ್ಯವಾಗಿ ಕೇಳಿದ್ದೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ವಿವಾಹ ಮುರಿದು ಬೀಳಲು ಕಾರಣವೇ ಅಚ್ಚರಿಯದ್ದಾಗಿದೆ. ವಧು ಬರೀ ಫೋಟೋ ನೋಡಿ ವಿವಾಹಕ್ಕೆ ಸಮ್ಮತಿಸಿದ್ದೆ, ಈ ವಿವಾಹ ಕೊನೆ ಕ್ಷಣದಲ್ಲಿ ರದ್ದಾಗಲು ಕಾರಣವಾಗಿದೆ.
ಈ ಘಟನೆ ನಡೆದಿದ್ದು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ನೌತಾನ್ ಬ್ಲಾಕ್ ಪ್ರದೇಶದಲ್ಲಿ. ವಧು ವಾಟ್ಸ್ಆಪ್ನಲ್ಲಿ ಹುಡುಗನ ಫೋಟೋವನ್ನು ನೋಡಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು. ಅದರಂತೆ ವಿವಾಹ ದೇವಾಲಯದಲ್ಲಿ ನಡೆಸಲು ಎಲ್ಲಾ ಸಿದ್ದತೆಯಾಗಿತ್ತು. ವಿವಾಹಕ್ಕೆ ಆಹ್ವಾನಿತರೆಲ್ಲರೂ ಆಗಮಿಸಿದ್ದರು.
ಮಂಟಪಕ್ಕೆ ಬಂದ ಮದುಮಗಳು ವರನನ್ನು ನೋಡಿದ ಕೂಡಲೇ ಸಿಟ್ಟಿನಿಂದ, ಕೂಗಾಡುತ್ತಾ ಮಂಟಪದಿಂದ ಹೊರ ನಡೆದಿದ್ದಾಳೆ. ಎಲ್ಲರೂ ಕಾರಣ ಕೇಳಿದಾಗ, ''ನಾನು ವಾಟ್ಸ್ಆಪ್ನಲ್ಲಿ ನೋಡಿದಾಗ ಆತ ಚೆನ್ನಾಗಿ ಕಾಣಿಸುತ್ತಿದ್ದ. ಆದರೆ ಈಗ ಆತನ ಮುಖ ನನಗೆ ಇಷ್ಟವಾಗಿಲ್ಲ. ಈ ಹುಡುಗ ವಾಟ್ಸ್ಆಪ್ನಲ್ಲಿ ನೋಡಿದಂತಿಲ್ಲ'' ಎಂದು ಅಳಲು ಆರಂಭಿಸಿದ್ದಾಳೆ ಎಂದು ವರದಿಯಾಗಿದೆ.
ಈ ವಿಚಾರವಾಗಿಯೇ ವಧು, ವರನ ಕುಟುಂಬದ ನಡುವೆ ವಾಗ್ವಾದ ನಡೆದು ಕೊನೆಗೆ ಮದುವೆಯೇ ಮುರಿದು ಬಿದ್ದಿದೆ ಎನ್ನಲಾಗಿದೆ.