ಬೆಂಗಳೂರು, ಮಾ.05 (DaijiworldNews/PY): ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ಸಿ.ಡಿ ಪ್ರಕರಣದ ವಿಚಾರಣೆಗಾಗಿ ಪೊಲೀಸರ ಎದುರು ಹಾಜರಾಗಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸರು ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಿದ್ದು, ಮಾ.4ರಂದು ವಿಚಾರಣೆಗಾಗಿ ಠಾಣೆಗೆ ಬರುವಂತೆ ತಿಳಿಸಿದ್ದರು. ಆದರೆ, ದಿನೇಶ್ ಅವರು ಭದ್ರತೆಯ ಕಾರಣ ನೀಡಿ, ವಿಚಾರಣೆ ಗೈರಾಗಿದ್ದರು. ಶುಕ್ರವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ದಿನೇಶ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಠಾಣೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ವಿಚಾರಣೆಗೆ ಬಂದಿದ್ದೇನೆ. ಪೊಲೀಸರು ತಿಳಿಸಿರುವಂತೆ ದಾಖಲೆ ತಂದಿದ್ದೇನೆ. ದಾಖಲೆಗಳನ್ನು ಪೊಲೀಸರಿಗೆ ನೀಡುತ್ತೇನೆ. ಇದರಿಂದ ಗೊಂದಲಗಳು ನಿವಾರಣೆಯಾಗಲಿವೆ. ಇನ್ನುಳಿದ ಮಾಹಿತಿಗಳನ್ನು ಬಹಿರಂಗವಾಗಿ ಹೇಳಲು ಆಗುದಿಲ್ಲ" ಎಂದು ತಿಳಿಸಿದರು.
ಸದ್ಯ ದಿನೇಶ್ ಅವರು ವಿಚಾರಣೆಗಾಗಿ ಕಬ್ಬನ್ ಪಾರ್ಕ್ ಠಾಣೆಯಲ್ಲಿದ್ದು, ಇನ್ಸ್ಪೆಕ್ಟರ್ ನೇತೃತ್ವದ ತಂಡ ಮಾಹಿತಿ ಕಲೆಹಾಕುತ್ತಿದೆ.