ನವದೆಹಲಿ, ಮಾ.05 (DaijiworldNews/HR): ಕೇಂದ್ರ ಸರ್ಕಾರವು ತೆರಿಗೆ ಹೆಸರಿನಲ್ಲಿ ದರೋಡೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಒಂದು ನಿಮಿಷ 10 ಸೆಕೆಂಡುಗಳ ಕಾಲ ಇರುವ ಸ್ಪೀಕ್ ಅಪ್ ಇಂಡಿಯಾ ವೀಡಿಯೊ ಸಂದೇಶದ ಮೂಲಕ ಮಾತನಾಡಿದ ಅವರು, ತೈಲ ಬೆಲೆಗಳ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿಯುತ್ತಿದೆ, ಜೊತೆಗೆ ಕೇಂದ್ರ ಸರ್ಕಾರವು ತೆರಿಗೆ ಹೆಸರಿನಲ್ಲಿ ದರೋಡೆ ನಡೆಸುತ್ತಿದ್ದು" ಎಂದಿದ್ದಾರೆ.
ಇನ್ನು "ಈ ದರೋಡೆಯಿಂದ 2-3 ದರೋಡೆಕೋರರು ಲಾಭ ಪಡೆಯುತ್ತಾರೆ. ಇದರ ವಿರುದ್ಧ ಇಡೀ ದೇಶ ಒಗ್ಗೂಡಿದೆ ಸರ್ಕಾರ ಆಲಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಕೂಡ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಬೆಲೆ ಏರಿಕೆಯ ವಿರುದ್ಧ ಮಾತನಾಡುತ್ತಾ, ಮೋದಿ ಸರ್ಕಾರ ಕೈಗೊಂಡ ಪ್ರತಿಯೊಂದು ಹೆಜ್ಜೆಯೂ ತನ್ನ ಬೊಕ್ಕಸವನ್ನು ತುಂಬಲು ಸಾಮಾನ್ಯ ನಾಗರಿಕರ ಜೇಬುಗಳನ್ನು ಖಾಲಿ ಮಾಡುತ್ತಿದೆ" ಎಂದು ಹೇಳಿದರು.
ಇನ್ನು ಇಂಧನ ಮತ್ತು ಅನಿಲ ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಮೇಲೆ ದಾಳಿ ನಡೆಸುತ್ತಿದೆ ಮತ್ತು ಯುಪಿಎ ಸರ್ಕಾರದ ಅವದಿಯಲ್ಲಿ ಇದ್ದ ಬೆಲೆಗಳ ಮಟ್ಟಕ್ಕೆ ಮರಳಿ ತರಬೇಕೆಂದು ಒತ್ತಾಯಿಸಿದೆ.