ನವದೆಹಲಿ, ಮಾ.05 (DaijiworldNews/PY): ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ನವದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 100ನೇ ದಿನಕ್ಕೆ ಕಾಲಿಟ್ಟಿದೆ. ಈ ನಿಟ್ಟಿನಲ್ಲಿ ಮಾ.6ರ ಶನಿವಾರದಂದು ನವದೆಹಲಿಯ ಹೊರವಲಯದಲ್ಲಿ ಪ್ರಮುಖ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
"ಐದು ತಾಸುಗಳ ಕಾಲ ಆರು ಪಥದ ಪಶ್ಚಿಮ ಪೆರಿಫರಲ್ ಎಕ್ಸ್ಪ್ರೆಸ್ ಹೆದ್ದಾರಿಗೆ ದಿಗ್ಭಂಧನ ಹೇರಲಾಗುವುದು" ಎಂದು ಶುಕ್ರವಾರ ರೈತ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.
"ನೂರು ದಿನಗಳ ಪ್ರತಿಭಟನೆಯ ಬಳಿಕ ಸರ್ಕಾರದ ಮೇಲೆ ನೈತಿಕವಾದ ಒತ್ತಡ ಬೀರಲಿದೆ ಎಂದು ನಾವು ನಂಬಿದ್ದೇವೆ. ಏಕೆಂದರೆ ಹವಮಾನ ಹದಗೆಡುತ್ತಿದೆ. ಸರ್ಕಾರವನ್ನು ಈ ವಿಚಾರ ದುರ್ಬಲಗೊಳಿಸಲಿದ್ದು, ನಮ್ಮ ಜೊತೆ ಮಾಕುಕತೆ ಮಾಡಬೇಕಾಗುತ್ತದೆ" ಎಂದು ಸಂಯುಕ್ತ ಕಿಸಾನ್ ಮೋರ್ಚಾ ವಕ್ತಾರ ದರ್ಶನ್ ಪಾಲ್ ಹೇಳಿದ್ದಾರೆ.
"ರೈತರು ಚಳಿಯನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದರು. ದೆಹಲಿಯಲ್ಲಿ ಈಗ ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗುತ್ತಿದೆ. ಇದು ಯಾವುದೂ ಕೂಡಾ ಹೋರಾಟಕ್ಕೆ ಅಡ್ಡಿಯಾಗುವುದಿಲ್ಲ. ಕೃಷಿ ಕಾಯ್ದೆಗಳು ನಮಗೆ ಮರಣ ಶಾಸನವಿದ್ದಂತೆ. ನಾವು ದೀರ್ಘ ಹೋರಾಟಕ್ಕೆ ಸಹ ಸಿದ್ದ" ಎಂದು ತಿಳಿಸಿದ್ದಾರೆ.
ಪ್ರಾಚೀನ ಮಾರುಕಟ್ಟೆಗಳಿಗೆ ಹೊಸ ಕೃಷಿ ಕಾಯ್ದೆಗಳು ಅಧಿಕವಾದ ಹೂಡಿಕೆಗಳನ್ನುತರಲಿವೆ ಎಂದು ಸರ್ಕಾರ ಹೇಳುತ್ತಿದ್ದು, ಆದರೆ, ಕನಿಷ್ಠ ಬೆಂಬಲ ಬೆಲೆಗಾಗಿ ರೈತ ಸಂಘಟನೆಗಳ ಒಕ್ಕೂಟವು ಒತ್ತಾಯಿಸಿವೆ.