ಬೆಂಗಳೂರು, ಮಾ.05 (DaijiworldNews/MB): ''ಸರ್ಕಾರಿ, ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೊರೊನಾ ಲಸಿಕೆ ಉಚಿತವಾಗಿ ನೀಡಬೇಕು. ಇದಕ್ಕಾಗಿ ಬೇಕಾದ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಡಬೇಕು'' ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರವು ಕೊರೊನಾ ಲಸಿಕೆಗೆ ಖಾಸಗಿ ಆಸ್ಪತ್ರೆಗಳಲ್ಲಿ ರೂ.250 ಶುಲ್ಕ ನಿಗದಿಪಡಿಸಿದೆ. ಈ ವಿಚಾರವಾಗಿ ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ''ಕೋವಿಡ್ ಚಿಕಿತ್ಸೆ ಮತ್ತು ಲಸಿಕೆ ನಿಯಂತ್ರಣಕ್ಕಾಗಿಯೇ ಪಿ.ಎಂ ಕೇರ್ಸ್ ನಿಧಿಗೆ ಕೇಂದ್ರ ಸರ್ಕಾರ ಹಣ ಸಂಗ್ರಹಿಸಿದೆ. ಆ ನಿಧಿಯನ್ನು ಕೋವಿಡ್ ಲಸಿಕೆಯ ಉಚಿತ ವಿತರಣೆಗೆ ಬಳಸಬೇಕು'' ಎಂದು ಒತ್ತಾಯಿಸಿದ್ದಾರೆ.
''ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಗೆ ರೂ.250 ಶುಲ್ಕ ನಿಗದಿಪಡಿಸಿರುವುದರಿಂದಾಗಿ ಶೇಕಡಾ 70 ರಷ್ಟಿರುವ ಬಡಜನತೆ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕೋವಿಡ್ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಿದೆ'' ಎಂದು ಅಭಿಪ್ರಾಯಿಸಿದ್ದಾರೆ.
''ಈಗಾಗಲೇ ಭಾರತ ಎರಡು ಬಗೆಯ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿದಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಇಲ್ಲಿನ ವರೆಗೆ ಶೇಕಡ 0.5 ರಷ್ಟು ಜನಸಂಖ್ಯೆಗಷ್ಟೆ ಲಸಿಕೆ ನೀಡಿರುವುದು ವಿಷಾದನೀಯ ಬೆಳವಣಿಗೆ'' ಎಂದು ಹೇಳಿದ್ದಾರೆ.
''ಇತ್ತೀಚೆಗೆ ಕೊರೊನಾ ಸೋಂಕು ಉಲ್ಭಣಗೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಅನಾಹುತವಾದೀತು'' ಎಂದು ರಾಜ್ಯ, ಕೇಂದ್ರ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.