ಬೆಳಗಾವಿ, ಮಾ.05 (DaijiworldNews/MB): ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗರ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಾಗುತಲೇ ಇದೆ. ರಮೇಶ್ ಬೆಂಬಲಿಗರು ಗೋಕಾಕ್ - ಧಾರವಾಡ ರಸ್ತೆ ತಡೆ ನಡೆಸಿದ್ದು, ಈ ಸಂದರ್ಭ ರಮೇಶ್ ಬೆಂಬಲಿಗರಿಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಸಿಡಿ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿರುವ ರಮೇಶ್ ಬೆಂಬಲಿಗರು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೂ ಆಗ್ರಹಿಸಿದ್ದಾರೆ. ರಮೇಶ್ ಜಾರಕಿಹೊಳಿ ಸ್ವಕ್ಷೇತ್ರ ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಬೆಂಬಲಿಗರು ಬಸ್ ಸಂಚಾರ ಸ್ಥಗಿತಗೊಳಿಸಿ ಗೋಕಾಕ್ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಬೆಳಗಾವಿಯಲ್ಲಿಯೂ ಪ್ರತಿಭಟನೆ ನಡೆಯುತ್ತಲಿದೆ.
ತೀವ್ರ ಆಕ್ರೋಶಕ್ಕೆ ಒಳಗಾಗಿರುವ ರಮೇಶ್ ಜಾರಕಿಹೊಳಿ ಬೆಂಬಲಿಗರು ಟೈಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವುದು ಮಾತ್ರವಲ್ಲದೆ, ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಪೊಲೀಸರು ತಡೆದು ಅವರನ್ನು ರಕ್ಷಿಸಿದ್ದಾರೆ.
ಗೋಕಾಕ್ನಲ್ಲಿ ಕಾಲೇಜುಗಳನ್ನು ಮುಚ್ಚಲಾಗಿದೆ. ಸರ್ಕಾರಿ ಬಸ್ ಸಂಚಾರವನ್ನೂ ತಡೆಯಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ಬಸ್ ಸಂಚಾರವಿಲ್ಲದೇ ಜನರು ನಡೆದುಕೊಂಡೇ ಊರುಗಳಿಗೆ ತೆರಳುತ್ತಿದ್ದಾರೆ. ಬೆಳಗಾವಿಯಲ್ಲೂ ಪ್ರತಿಭಟನೆಗಳು ಅಧಿಕವಾಗುತ್ತಿದ್ದು, ಭದ್ರತೆಗಾಗಿ 3 ಕೆ.ಎಸ್.ಆರ್.ಪಿ. ತುಕಡಿ, 6 ಡಿಎಆರ್ ತುಕಡಿ, ನಾಲ್ವರು ಡಿ.ವೈ.ಎಸ್.ಪಿ., 10 ಸಿಪಿಐ ನಿಯೋಜಿಸಲಾಗಿದೆ.
ಬೇಕು ಬೇಕೆಂದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಸಿಡಿ ಬಿಡುಗಡೆ ಮಾಡಿದ ದಿನೇಶ್ ಕಲ್ಲಳ್ಳಿ ವಿರುದ್ಧವೂ ಕೈಗೊಳ್ಳಬೇಕು. ಸಚಿವ ಸ್ಥಾನವನ್ನು ಮತ್ತೆ ರಮೇಶ್ ಜಾರಕಿಹೊಳಿಗೆ ಮತ್ತೆ ನೀಡಬೇಕು. ಸಿಡಿ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.