ಬೆಂಗಳೂರು, ಮಾ.05 (DaijiworldNews/PY): "ಟೀಕೆ ಮಾಡುವುದೇ ವಿಪಕ್ಷ ನಾಯಕರ ಕೆಲಸ. ಆರ್ಎಸ್ಎಸ್ ಎಲ್ಲದಕ್ಕೂ ಕಾರಣ ಎಂದು ಆರೋಪಿಸುತ್ತಿರುತ್ತಾರೆ. ಹಾಗಾದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವ ಹಿನ್ನೆಲೆಯಿಂದ ಬಂದಿದ್ದಾರೆ?" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಲ್ಲದ್ದಕ್ಕೂ ಆರ್ಎಸ್ಎಸ್ ಕಾರಣ ಎಂದು ಆರೋಪ ಮಾಡುತ್ತಿರುತ್ತಾರೆ. ಇಂದು ಈ ಸ್ಥಾನಕ್ಕೆ ಬರಲು ಆರ್ಎಸ್ಎಸ್ ಕಾರಣ. ನಾನು ಅವರ ಐಡಿಯಾಲಜಿಗಳನ್ನು ಕಲಿತಿದ್ದೇನೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಕೂಡಾ ಆರ್ಎಸ್ಎಸ್ ಕಾರಣ. ಈ ವಿಚಾರವನ್ನು ಪ್ರಧಾನಿ ಮೋದಿ ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ದಲ್ಲಿ ಸಿದ್ದರಾಮಯ್ಯ ಅವರ ಹಿನ್ನೆಲೆ ಏನು?" ಎಂದು ಕೇಳಿದರು.
"ಮೊದಲು ಪಕ್ಷದಲ್ಲಿರುವ ಆಂತರಿಕ ಗೊಂದಲಗಳು ನಿವಾರಣೆಯಾಗಬೇಕು. ಎಷ್ಟು ಬಾರಿ ಇವರು ಆರ್ಎಸ್ಎಸ್ನ ಬಗ್ಗೆ ಟೀಕೆ ಮಾಡುತ್ತಾರೋ, ಆರ್ಎಸ್ಎಸ್ ಅಷ್ಟೇ ಬಲಿಷ್ಠವಾಗಲಿದೆ" ಎಂದು ತಿಳಿಸಿದರು.
"ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ ಮಾತುಗಳು ಇಡೀ ಕಾಂಗ್ರೆಸ್ ಪಕ್ಷ ಹೇಳಿದಂತೆ. ನೀವು ವಿಪಕ್ಷ ನಾಯಕರಾಗಿ ಹಗುರವಾಗಿ ಮಾತನಾಡಬೇಡಿ. ನಿಮ್ಮ ನಡತೆ ಉತ್ತಮವಾಗಿರಲಿ" ಎಂದರು.