ಬೆಂಗಳೂರು, ಮಾ.05 (DaijiworldNews/HR): ಬೆಂಗಳೂರಿಗೆ ವಿದ್ಯಾರ್ಥಿ ವೀಸಾ ಹೆಸರಿನಲ್ಲಿ ಬಂದು ಬಳಿಕ ಪ್ರತಿಷ್ಠಿತರಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯನ್ನು ಯುಗೋಚಿಕೂ ವಿಕ್ಟರ್( (34) ಎಂದು ಗುರುತಿಸಲಾಗಿದೆ.
ಬಂಧಿತನಿಂದ ಬರೋಬ್ಬರಿ 40 ಲಕ್ಷ ರೂ. ಮೌಲ್ಯದ ಅರ್ಧ ಕೆ.ಜಿ. ಎಂಡಿಎಂಎ ಮತ್ತು ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ವಿಕ್ಟರ್ ವಿದ್ಯಾರ್ಥಿ ವೀಸಾ ಮೇಲೆ ಬಂದಿದ್ದು, ವೀಸಾ ಅವಧಿ ಮುಗಿದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ. ಮುಂಬಯಿನಲ್ಲಿರುವ ಪರಿಚಿತ ಮೈಕೇಲ್ ಎಂಬಾತನಿಂದ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತರಿಸಿಕೊಂಡು ಪ್ರತಿಷ್ಠಿತ ವ್ಯಕ್ತಿಗಳ ಸಂಪರ್ಕ ಬೆಳೆಸಿ ಅವರಿಗೆ ದುಬಾರಿ ಬೆಲೆಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಕಳೆದ ಮೂರು ವರ್ಷಗಳಿಂದಲೂ ಇವನು ಡ್ರಗ್ ಡೀಲಿಂಗ್ ನಲ್ಲಿ ಶಾಮೀಲಾಗಿದ್ದ ಎನ್ನಲಾಗಿದೆ.
ಇನ್ನು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಲಕ್ಷ್ಮೀ ಕಾಂತಯ್ಯ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು, ವಿಕ್ಟರ್ ವಿಚಾರಣೆ ವೇಳೆ ಕೆಲವು ಪ್ರತಿಷ್ಠಿತ ವ್ಯಕ್ತಿಗಳು ಡ್ರಗ್ ಖರೀದಿ ಮಾಡಿರುವ ಮಾಹಿತಿ ಸಿಕ್ಕಿದ್ದು ಅವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.