ಮುಂಬೈ, ಮಾ.05 (DaijiworldNews/PY): ತನ್ನ ನೌಕರರಿಗೆ ರಿಲಯನ್ಸ್ ಇಂಡಸ್ಟ್ರೀಸ್ ಗುಡ್ ನ್ಯೂಸ್ ನೀಡಿದ್ದು, ತನ್ನ ಎಲ್ಲಾ ನೌಕರರಿಗೆ ಹಾಗೂ ಅವರ ಕುಟುಂಬಗಳಿಗೆ ಕೊರೊನಾ ಲಸಿಕೆಗಳ ವೆಚ್ಚವನ್ನು ಭರಿಸಲಿದೆ ಎಂದು ಘೋಷಿಸಿದೆ.
ರಿಲಯನ್ಸ್ ಫೌಂಡೇಷನ್ನ ಅಧ್ಯಕ್ಷೆ ನೀತಾ ಅಂಬಾನಿ ಅವರು, ರಿಲಯನ್ಸ್ನ ಎಲ್ಲಾ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿದ್ದು, "ನೌಕರರು ಹಾಗೂ ಅವರ ಕುಟುಂಬದವರು ಕೊರೊನಾ ಲಸಿಕೆ ಪಡೆಯಲು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ರಿಲಯನ್ಸ್ನ ಎಲ್ಲಾ ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರರಿಗೆ ಆರಂಭಿಕ ಕೊರೊನಾ ಲಸಿಕೆ ಹಾಕಲು ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.
"ನೀವು ಹಾಗೂ ನಿಮ್ಮ ಕುಟುಂಬದವರ ಲಸಿಕೆಯ ಪೂರ್ಣ ವೆಚ್ಚವನ್ನು ರಿಲಯನ್ಸ್ ಭರಿಸಲಿದೆ. ನಿಮ್ಮ ಬೆಂಬಲದ ಜೊತೆ, ನಾವು ಶೀಘ್ರವೇ ಕೊರೊನಾ ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸಲು ಸಾಧ್ಯ. ಅಲ್ಲಿಯ ತನಕ ನೀವು ಮುಂಜಾಗ್ರತಾ ಕ್ರಮ ಕೈಗೊಳ್ಳಿ. ನಾವು ಕೊರೊನಾ ಹೋರಾಟದ ಕೊನೆಯ ಹಂತದಲ್ಲಿದ್ದೇವೆ. ನಾನು ಇದನ್ನು ಒಟ್ಟಾಗಿ ಗೆಲ್ಲಬೇಕು ಹಾಗೂ ಗೆಲ್ಲುತ್ತೇವೆ" ಎಂದು ಹೇಳಿದ್ದಾರೆ.