ಬೆಂಗಳೂರು, ಮಾ 05 (DaijiworldNews/MS): ರಾಜ್ಯ ರಾಜಕೀಯದಲ್ಲಿ ಈಗ ಅಂಗಿ- ಚಡ್ಡಿಯದ್ದೇ ಗಲಾಟೆ ಜೋರಾಗಿ ಬಿಜೆಪಿ - ಕಾಂಗ್ರೆಸ್ ಪಕ್ಷಗಳು ಟ್ವೀಟ್ ಸಮರವನ್ನು ಮುಂದುವರಿಸಿದೆ. ಬಜೆಟ್ ಅಧಿವೇಶದ ಮೊದಲ ದಿನವೇ ವಿಧಾನಸಭೆಯಲ್ಲಿ ಸ್ವ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ ಎಂದು ಸದನವೇ ತಲೆತಗ್ಗಿಸುವಂತೆ ಶಾಸಕ ಬಿ.ಕೆ ಸಂಗಮೇಶ್ ಶರ್ಟ್ ಬಿಚ್ಚಿದ ಘಟನೆ ಬಿಜೆಪಿಗೆ ಕಾಂಗ್ರೆಸ್ ಮೇಲೆ ಮುಗಿಬೀಳಲುವ ವಿಚಾರವಾದರೆ, ಇತ್ತ ಕಡೆ ಕಾಂಗ್ರೆಸ್ ಗೆ ರಮೇಶ್ ಜಾರಕಿಹೊಳಿಯ ರಾಸಲೀಲೆ ಸಿಡಿ ಪ್ರಕರಣ ಪ್ರಮುಖ ಅಸ್ತ್ರವಾಗಿದೆ.
ಸಂಗಮೇಶ್ ಅಂಗಿ ಬಿಚ್ಚಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ರೆ ಕಾಂಗ್ರೆಸ್ ನಮ್ಮವರು ಅಂಗಿ ಬಿಚ್ಚಿದ್ರೆ ನಿಮ್ಮವರು ಚಡ್ದಿಯೇ ಬಿಚ್ಚುತ್ತಾರೆ ಎಂದು ಪರಸ್ಪರ ವಾಗ್ದಾಳಿ ನಡೆಸಿದೆ. "ಸದನದ ಘನತೆಗೆ ಅಪಮಾನ ಮಾಡಿದ ಕಾಂಗ್ರೆಸ್ ಸದನದ ಚರ್ಚೆಯನ್ನು ಬೀದಿಜಗಳದಂತೆ ಭಾವಿಸಿದಂತಿದೆ. ಹೆಸರಿಗೆ ದೇಶದ ಅತೀ ಹಳೆಯ ರಾಜಕೀಯ ಪಕ್ಷ. ಮಾಡುವುದೆಲ್ಲಾ ಜನವಿರೋಧಿ ಕೆಲಸ. ಅದಕ್ಕೇ ನಿಮಗೆ ಜನರ ಧ್ವನಿ ಚೆನ್ನಾಗಿ ಕೇಳಿಸುತ್ತಿಲ್ಲ" ಎಂದು ಕಾಂಗ್ರೆಸ್ ವಿರುದ್ದ ಬಿಜೆಪಿ ಟ್ವೀಟ್ ಮೂಲಕ ಹರಿಹಾಯ್ದಿದೆ.
ಇನ್ನು ಇದಕ್ಕೆ ಉತ್ತರವಾಗಿ, ತಮಗಾಗುತ್ತಿರುವ ನೋವನ್ನು ಹೇಳಿಕೊಳ್ಳಲು, ದಪ್ಪ ಚರ್ಮದ ಸರ್ಕಾರದ ಗಮನ ಸೆಳೆಯಲು ಸಂಗಮೇಶ್ ಅಂಗಿ ಬಿಚ್ಚಿದ್ದಾರೆ.ನಿಮ್ಮವರು ಎಲ್ಲೆಂದರಲ್ಲಿ "ಚಡ್ಡಿಯನ್ನೇ ಬಿಚ್ಚುತ್ತಿದ್ದಾರೆ"! ಮೊದಲು ನಿಮ್ಮವರ ಚಡ್ಡಿಯ ಲಾಡಿಯನ್ನು ಗಟ್ಟಿಯಾಗಿ ಭದ್ರಗೊಳಿಸಿ ಎಂದು ಪ್ರತ್ಯುತ್ತರ ನೀಡಿದೆ.