ಬೆಳಗಾವಿ, ಮಾ.05 (DaijiworldNews/MB): ರಾಸಲೀಲೆ ಸಿ.ಡಿ. ಪ್ರಕರಣದ ಕಾರಣ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಭಾರೀ ಪೈಪೋಟಿ ಆರಂಭವಾಗಿದ್ದು ದೆಹಲಿ ಮಟ್ಟದಲ್ಲೂ ಲಾಬಿ ನಡೆಯುತ್ತಿದೆ.
ಒಂದೆಡೆ ಬೆಳಗಾವಿ ಜಿಲ್ಲೆಯನ್ನು ತನ್ನ ಹಿಡಿತಕ್ಕೆ ಪಡೆಯಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೈಕಮಾಂಡ್ ಮೂಲಕ ಯತ್ನಿಸುತ್ತಿರುವಾಗ ಇನ್ನೊಂದೆಡೆ ಸಚಿವ ಉಮೇಶ್ ಕತ್ತಿ ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಲೂ ದೊಡ್ಡ ಮಟ್ಟದ ಲಾಬಿ ನಡೆಸುತ್ತಿದ್ದಾರೆ.
ಏತನ್ಮಧ್ಯೆ ಬೆಳಗಾವಿ ಉಸ್ತುವಾರಿ ತನ್ನದಾಗಿಸಿಕೊಳ್ಳಲು ಶಶಿಕಲಾ ಜೊಲ್ಲೆಯವರು ಕೂಡಾ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇವೆಲ್ಲವೂ ಕೂಡಾ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಿನ್ನೆಲೆ ಈ ಜಿಲ್ಲೆಯಿಂದ ಹೊರಗಿನ ಜಿಲ್ಲೆಯವರಿಗೆ ಉಸ್ತುವಾರಿ ನೀಡಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿಗೂ ಮುನ್ನ ಬೆಳಗಾವಿ ಜಿಲ್ಲೆಯ ಉಸ್ತುವಾರಿಯಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಜಿಲ್ಲೆಯ ಉಸ್ತುವಾರಿಯನ್ನು ಮತ್ತೆ ನೀಡುವ ಯೋಚನೆಯನ್ನು ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದಕ್ಕೆ ಬೆಳಗಾವಿ ಜಿಲ್ಲೆಯ ನಾಯಕರು ವಿರೋಧ ವ್ಯಕ್ತಪಡಿಸಿದರೆ, ಉಮೇಶ್ ಕತ್ತಿಯನ್ನು ಉಸ್ತುವಾರಿ ಮಾಡುವ ಚಿಂತನೆಯೂ ಕೂಡಾ ಇದೆ ಎನ್ನಲಾಗಿದೆ.