ಉತ್ತರಪ್ರದೇಶ, ಮಾ.05 (DaijiworldNews/HR): ಗಡಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಗಾಯಗೊಂಡಿದ್ದ ಭಾರತದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟ ವ್ಯಕ್ತಿಯನ್ನು ಗೋವಿಂದ (26) ಎಂದು ಗುರುತಿಸಲಾಗಿದೆ.
ಗೋವಿಂದ ಅವರು ಪಪ್ಪು ಸಿಂಗ್ ಮತ್ತು ಗುರ್ಮೀತ್ ಸಿಂಗ್ ಎನ್ನುವವರೊಂದಿಗೆ ನೇಪಾಳಕ್ಕೆ ಪ್ರವೇಶಿಸಿದ್ದು, ಈ ವೇಳೆ ಮೂವರನ್ನು ನೇಪಾಳ ಪೊಲೀಸರು ತಡೆದಿದ್ದು, ವಾಗ್ವಾದ ನಡೆದು ಗೋವಿಂದ ಅವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪಿಲಿಭಿತ್ನ ಪೊಲೀಸ್ ಸೂಪರಿಂಟೆಂಡೆಂಟ್ ಜೈ ಪ್ರಕಾಶ್, "ಮೂವರು ಭಾರತೀಯರು ನೇಪಾಳ ಗಡಿ ಪ್ರವೇಶಿಸಿದ್ದಾರೆ ಹಾಗೂ ಅಲ್ಲಿನ ಪೊಲೀಸರೊಂದಿಗೆ ವಾಗ್ವಾದ ನಡೆದು ಬಳಿಕ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡಿದ್ದ ವ್ಯಕ್ತಿಯು ಆಸ್ಪತ್ರೆಗೆ ಸೇರಿಸುವ ವೇಳೆ ಮೃತಪಟ್ಟಿದ್ದಾನೆ. ಮತ್ತೊಬ್ಬ ಭಾರತದ ಗಡಿಯತ್ತ ಧಾವಿಸಿ ಜೀವ ಉಳಿಸಿಕೊಂಡಿದ್ದಾನೆ. ಆದರೆ, ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ" ಎಂದು ತಿಳಿಸಿದ್ದಾರೆ.